ಬೆಂಗಳೂರು, ಮೇ 29 : ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟದಲ್ಲಿ ಯಾವುದೇ ಕಾರಣಕ್ಕೂ ಶಾಸಕ ಜಮೀರ್ ಅಹಮದ್ ಸ್ಥಾನ ನೀಡಬಾರದು ಎಂದು ದೇವೇಗೌಡರು ಕಾಂಗ್ರೆಸಿಗರಿಗೆ ಖಡಕ್ ಸೂಚನೆ ನೀಡಿದ್ದಾರೆ
ಶಾಸಕ ಜಮೀರ್ ಅಹಮದ್ ಅಪ್ಪಿ ತಪ್ಪಿಯೂ ಯಾವುದೇ ಕಾರಣಕ್ಕೂ ಸಂಪುಟದಲ್ಲಿ ಇರಲೇಬಾರದು ಎಂದು ಮಾಜಿ ಪ್ರಧಾನಿ ತಿಳಿಸಿದ್ದಾರೆ ಅಂತ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಕ್ಯಾಬಿನೆಟ್ಗೆ ಮುಸ್ಲಿಂ ಕೋಟಾದಡಿ ಖಾದರ್, ತನ್ವೀರ್ ಸೇಠ್, ರೋಷನ್ಬೇಗ್, ಜಮೀರ್ ಅಹಮದ್ ಪರ ಮಾಜಿ ಸಿಎಂ ಸಿದ್ದರಾಮಯ್ಯ ನಿಂತಿದ್ದಾರೆ. ಬಂಡಾಯಗಾರರಿಗೆ ತೊಂದರೆಯಾಗಬಾರದು ಅಂತ ಹೇಳಿದ್ದರು. ಆದ್ರೆ ಇದೀಗ ದೇವೇಗೌಡರ ಸೂಚನೆಯಿಂದ ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.
ನ್ಯಾಷನ್ ಟ್ರಾವೆಲ್ಸ್ ಉದ್ಯಮದಲ್ಲಿ ಪಾಲು ಹೊಂದಿರುವ ಜಮೀರ್ ಅಹಮದ್ ಖಾನ್, ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಆಪ್ತರಾಗಿದ್ದರು. ಅವರು ಪ್ರಬಲ ಮುಸ್ಲಿಂ ನಾಯಕರೂ ಹೌದು. 2016ರಲ್ಲಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಕ್ರಾಸ್ ವೋಟಿಂಗ್ ಮಾಡಿದ್ದ ಜಮೀರ್ ಅಹಮದ್ ಖಾನ್, ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದರಿಂದ ಅವರನ್ನು, ಜೆಡಿಎಸ್ ಪಕ್ಷದಿಂದ ಅಮಾನತುಗೊಳಿಸಿತ್ತು.
ನಂತರ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಒಡನಾಟ ಬೆಳೆಸಿಕೊಂಡು ಕಾಂಗ್ರೆಸ್ ಪರ ಕಾರ್ಯಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ಬಳಿಕ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡು 2018 ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಈ ಹಿಂದೆ 2013ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಗೆಲುವು ಸಾಧಿಸಿದ್ದ ಜಮೀರ್ ಅಹಮದ್ ಪಕ್ಷದ ವಿರುದ್ಧ ತೊಡೆ ತಟ್ಟಿದ್ರು.