ಉಡುಪಿ, ನ. 02 (DaijiworldNews/MB) : ಮುಂದಿನ ವರ್ಷ ಜನವರಿ 15 ರಿಂದ 45 ದಿನಗಳ ಕಾಲ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಅಭಿಯಾನ ನಡೆಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ಈ ಅಭಿಯಾನವು ಅಖಿಲ ಭಾರತ ಮಟ್ಟದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಹೇಳಿದೆ.









ನವೆಂಬರ್ 1 ರ ಭಾನುವಾರ ಅಯೋಧ್ಯೆ ಪ್ರವಾಸಿ ಮಂದಿರದಲ್ಲಿ ಟ್ರಸ್ಟಿಗಳು ಸಭೆ ಸೇರಿದ್ದು ಜನವರಿ 15 ರಿಂದ 45 ದಿನಗಳ ಅವಧಿಯಲ್ಲಿ ಸ್ವಯಂಸೇವಕರು ದೇಣಿಗೆ ಸಂಗ್ರಹಿಸಲು ಮನೆ-ಮನೆಗೆ ಭೇಟಿ ನೀಡಲು ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಈ ಸಭೆಯಲ್ಲಿ ನಿರ್ಮಾಣ ಕಾರ್ಯವನ್ನು ನಿರ್ವಹಿಸುವ ಎಲ್ ಆಂಡ್ ಟಿ ಕಂಪನಿಯ ಪ್ರತಿನಿಧಿಗಳು ಮತ್ತು ಮೇಲ್ವಿಚಾರಣೆಯನ್ನು ವಹಿಸಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಈ ಎರಡು ಸಂಸ್ಥೆಗಳ ಜವಾಬ್ದಾರಿಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ.
ವಿವಿಧ ಬ್ಯಾಂಕುಗಳು ತಮ್ಮ ಬ್ಯಾಂಕ್ನಲ್ಲಿ ಖಾತೆ ತೆರೆಯುವಂತೆ ಟ್ರಸ್ಟ್ನ್ನು ಸಂಪರ್ಕಿಸಿ ಮನವಿ ಮಾಡಿದ್ದು ಸಭೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಲ್ಲಿ ಖಾತೆ ತೆರೆಯುವ ಬಗ್ಗೆ ತೀರ್ಮಾನಿಸಲಾಗಿದೆ.
ಇನ್ನು ಮಂದಿರ ನಿರ್ಮಾಣ ಸಂದರ್ಭದಲ್ಲಿ ಇಂಜಿನಿಯರ್ಗಳು ಭಾರತೀಯ ವಾಸ್ತು ರೀತಿಯ ಬಗ್ಗೆಯೂ ಚಿಂತನೆ ನಡೆಸಬೇಕು ಎಂಬ ಅಭಿಪ್ರಾಯವು ಸಭೆಯಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಲ್ಕೈದು ವಾಸ್ತುಶಿಲ್ಪ ತಜ್ಞರ ಸಮಿತಿಯ ರಚನೆಗೆ ಸಭೆ ನಿರ್ಧರಿಸಿತು.
ಸಭೆಯಲ್ಲಿ ಟ್ರಸ್ಟಿಗಳಾದ ಶ್ರೀ ಗೋವಿಂದ ದೇವಗಿರಿ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ನೃಪೇಂದ್ರ ಮಿಶ್ರಾ, ಚಂಪತ್ ರಾಯ್ ದಿನೇಶ್ ಚಂದ್ರ, ಡಾ ಅನಿಲ್ ಮಿಶ್ರಾ, ರಾಜ ವಿಮಲೇಂದ್ರ ಮಿಶ್ರಾ ಮುಂತಾದವರು ಭಾಗವಹಿಸಿದ್ದರು. ನಂತರ ಟ್ರಸ್ಟಿಗಳು ಸಂಜೆ 6 ರಿಂದ 7 ರ ನಡುವೆ ರಾಮಲಲ್ಲಾನ ಪೂಜೆಯಲ್ಲಿ ಭಾಗವಹಿಸಿದರು.
ಪೇಜಾವರ ಸ್ವಾಮೀಜಿ ಸೋಮವಾರ ನೈಮಿಶಾರಣ್ಯ, ಹರಿದ್ವಾರ ಮತ್ತು ಬದ್ರಿನಾಥ್ಗೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಅವರು ನವೆಂಬರ್ 10 ಮತ್ತು 11 ರಂದು ನಡೆಯಲಿರುವ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಭೇಟಿ ನೀಡಲಿದ್ದಾರೆ.