ಉಡುಪಿ, ನ.02 (DaijiworldNews/PY): ಉಡುಪಿ ಸರಕಾರಿ ಅನುದಾನಿತ ನಿಟ್ಟೂರು ಪ್ರೌಢಶಾಲೆಯ ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ನಯನಾ ಕುಟುಂಬಕ್ಕೆ ಉತ್ತಮ ಮನೆಯನ್ನು ಒದಗಿಸಿದ ನಿವೃತ್ತ ಶಿಕ್ಷಕ ಮುರಳಿ ಕಡೆಕಾರ್ ಅವರ ಕಾರ್ಯವನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಶ್ಲಾಘಿಸಿದ್ದಾರೆ.


ಈ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ವೊಂದನ್ನು ಮಾಡಿರುವ ಸಚಿವರು, "ಮುರಳಿ ಕಡೆಕಾರ್ ಅವರೊಂದಿಗೆ ಮಾತನಾಡಿ ಅವರಿಗೆ ಧನ್ಯವಾದಗಳನ್ನು ತಿಳಿಸಿದೆ. ಅತ್ಯಂತ ನಿರ್ಲಿಪ್ತ ಭಾವನೆಯಿಂದ ಅವರು ನನ್ನ ಧನ್ಯವಾದಗಳನ್ನು ಸ್ವೀಕರಿಸಿದ್ದು ಒಂದು ವಿಶೇಷವೇ!" ಎಂದಿದ್ದಾರೆ.
"ಮುರುಳಿ ಕಡೇಕರ್ ಉಡುಪಿಯ ಸರಕಾರಿ ಅನುದಾನಿತ ನಿಟ್ಟೂರು ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಮೊನ್ನೆ ನಿವೃತ್ತಿ ಹೊಂದಿದರು. ನಿವೃತ್ತಿ ಆಗಿರುವ ಈ ಶಿಕ್ಷಕ ಅವರ ಶಾಲೆಯ ಒಂಬತ್ತನೇ ತರಗತಿಯ ಬಾಲಕಿ ನಯನಾಳ ಕುಟುಂಬ ವಾಸವಾಗಿದ್ದ ಮನೆಯ ಪರಿಸ್ಥಿತಿ ಗಮನಿಸಿ ತನ್ನ ಸ್ವಂತ ಹಣದಿಂದ ಒಂದು ಒಳ್ಳೆಯ ಮನೆಯನ್ನು ಕಟ್ಟಿಸಿಕೊಟ್ಟು ಕೃತಾರ್ಥರಾಗಿದ್ದಾರೆ" ಎಂದು ತಿಳಿಸಿದ್ದಾರೆ.
"ಇಷ್ಟೇ ಅಲ್ಲದೆ ನಯನಾಳ ಉನ್ನತ ಶಿಕ್ಷಣಕ್ಕೂ ಆರ್ಥಿಕ ಸಹಾಯ ಮಾಡುವೆನೆಂದು ನಿರ್ಧರಿಸಿದ್ದಾರೆ. ಇಂತಹ ಶಿಕ್ಷಕರೇ ಸಮಾಜದ ನಿಜವಾದ ಶಕ್ತಿ. ಮುರಳಿ ಕಡೆಕಾರ್ ಅವರ ಈ ಪ್ರವೃತ್ತಿ ಮುಂದುವರಿಯಲು ಅವರಿಗೆ ಅಗತ್ಯ ಚೈತನ್ಯ ಭಗವಂತ ನೀಡಲಿ" ಎಂದು ಹಾರೈಸಿದ್ದಾರೆ.
ದಾಯ್ಜಿವಲ್ಡ್ ಜೊತೆ ಮಾತನಾಡಿದ ಮುರಳಿ ಕಡೆಕಾರ್ ಅವರು, "ನನ್ನ ಕಾರ್ಯವನ್ನು ರಾಜ್ಯ ಶಿಕ್ಷಣ ಸಚಿವರು ಗುರುತಿಸಿರುವುದಕ್ಕೆ ಸಂತೋಷವಾಗಿದೆ. ಸಚಿವರು ನನಗೆ ಶುಭ ಹಾರೈಸಿದ್ದಾರೆ. ಅವರು ನನ್ನ ಕಾರ್ಯವನ್ನು ಗುರುತಿಸಿದ್ದಾರೆ. ಇದು ನನಗೆ ಹೆಮ್ಮೆ ಹಾಗೂ ಸಂತೋಷದ ವಿಚಾರವಾಗಿದೆ. ನಾನು ಸಚಿವರಿಂದ ಅಂತಹ ಗೌರವವನ್ನು ನಿರೀಕ್ಷೆ ಮಾಡಿರಲಿಲ್ಲ. ಅವರ ಮೊಬೈಲ್ ಸಂಖ್ಯೆಯೂ ಕೂಡಾ ನನ್ನ ಬಳಿ ಇರಲಿಲ್ಲ. ಬೆಳಗ್ಗೆ ಅವರಿಂದ ಕರೆ ಬಂದಿದ್ದು, ನನ್ನ ಸೇವೆಯನ್ನು ಶ್ಲಾಘಿಸಿದ್ದಾರೆ. ಸುರೇಶ್ ಕುಮಾರ್ ಅವರು ತುಂಬಾ ಸರಳ ವ್ಯಕ್ತಿ ಎಂದು ನನಗೆ ತಿಳಿದಿತ್ತು" ಎಂದು ಹೇಳಿದ್ದಾರೆ.
"ನನ್ನನ್ನು ಗುರುತಿಸಿಕೊಳ್ಳುವ ಸಲುವಾಗಿ ಬಡ ವಿದ್ಯಾರ್ಥಿಗೆ ಮನೆಯನ್ನು ಕಟ್ಟಿಸಿಕೊಟ್ಟಿಲ್ಲ. ಬದಲಾಗಿ ನನ್ನಿಂದ ಸಮಾಜಕ್ಕೆ ಏನಾದರೂ ನೆರವಾಗಲಿ ಎನ್ನುವ ಕಾರಣದಿಂದ ಈ ಕಾರ್ಯವನ್ನು ಮಾಡಿದ್ದೇನೆ. ನಾನು ನಿಟ್ಟೂರು ಪ್ರೌಢಶಾಲೆಯ ಪ್ರಾಂಶುಪಾಲನಾಗಿದ್ದು, ಸೇವೆಯಿಂದ ನಿವೃತ್ತಿ ಹೊಂದುವ ಸಂದರ್ಭ ಸುರೇಶ್ ಕುಮಾರ್ ಅವರು ಶಿಕ್ಷಣ ಸಚಿವರಾಗಿದ್ದರು ಎನ್ನುವ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ತಿಳಿಸಿದ್ದಾರೆ.