ಕಾಸರಗೋಡು, ನ. 02 (DaijiworldNews/HR): ಬಂದ್ಯೋಡು ಸಮೀಪದ ಅಡ್ಕದಲ್ಲಿ ಗುಂಡಿನ ದಾಳಿ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದು, ಇದುವರೆಗೆ ಬಂಧಿತರಾದವರ ಸಂಖ್ಯೆ ಮೂರಕ್ಕೇರಿದೆ.

ಬಂಧಿತರನ್ನು ಬಂದ್ಯೋಡು ವೀರನಗರದ ಲತೀಫ್ (30) ಮತ್ತು ಬಂದ್ಯೋಡಿನ ಸಹಾದ್ (28) ಎಂದು ಗುರುತಿಸಲಾಗಿದೆ.
ಪ್ರಮುಖ ಆರೋಪಿ ಟಿಕ್ಕಿ ಅಮ್ಮಿ ಅಲಿಯಾಸ್ ಅಬ್ದುಲ್ ಆಮೀರ್ ನನ್ನು ಈ ಹಿಂದೆ ಬಂಧಿಸಲಾಗಿದೆ.
ಲತೀಫ್ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಉಪ್ಪಳ ಸೋಂಕಾಲಿನ ಅಲ್ತಾಫ್ ನನ್ನು ಕಾರಿನಲ್ಲಿ ಅಪಹರಿಸಿ ಕೊಂಡೊಯ್ದು ಕರ್ನಾಟಕದಲ್ಲಿ ಕೊಲೆಗೈದ ಪ್ರಕರಣದ ಎರಡನೇ ಆರೋಪಿಯಾಗಿದ್ದಾನೆ.
ಶನಿವಾರ ಬೆಳಿಗ್ಗೆ ಬಂದ್ಯೋಡಿನಲ್ಲಿ ಗುಂಡು ಹಾರಾಟ, ಕೊಲೆಯತ್ನ ಹಾಗೂ ವಾಹನಗಳನ್ನು ಹಾನಿಗೊಳಿಸಿದ ಘಟನೆ ನಡೆದಿತ್ತು. ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಹದಿಮೂರು ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.