ಬಂಟ್ವಾಳ, ನ. 02 (DaijiworldNews/SM): ತಾಲೂಕಿನಲ್ಲಿ ಇತ್ತೀಚಿಗೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸುಧಾರಿಸಲು ಬಂಟ್ವಾಳ ಪೊಲೀಸರು ಸಂಪೂರ್ಣ ಕಟ್ಟೆಚ್ಚರ ವಹಿಸಿ ಜಿಲ್ಲೆಯ ಹಿರಿಯ ಅಧಿಕಾರಿಗಳು ರೌಂಡ್ಸ್ ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂದು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಶಿವಮೊಗ್ಗ ತಿಳಿಸಿದ್ದಾರೆ.


ಬೆಳ್ತಂಗಡಿ, ಪುತ್ತೂರು, ಸುಬ್ರಹ್ಮಣ್ಯ, ಪುಂಜಾಲಕಟ್ಟೆ ಸೇರಿದಂತೆ ಹಲವು ಠಾಣೆಗಳ ಹಿರಿಯ ಅಧಿಕಾರಿಗಳು ಬಂಟ್ವಾಳದಲ್ಲಿ ರಾತ್ರಿ ಹಗಲು ರೌಂಡ್ಸ್ ಕಾರ್ಯದಲ್ಲಿ ತೊಡಗಿದ್ದಾರೆ. ಅಯಕಟ್ಟಿನ ಸ್ಥಳಗಳಲ್ಲಿ ಕೆ.ಎಸ್.ಆರ್. ಪಿ.ಡಿ.ಎ.ಆರ್. ನಿಯೋಜನೆ ಮಾಡಲಾಗಿದೆ. ಬಂಟ್ವಾಳ ತಾಲೂಕಿನ ಗಡಿಭಾಗದಲ್ಲಿ ಮತ್ತು ಬಂಟ್ವಾಳ, ವಿಟ್ಲ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಟ್ಟು 8 ಕಡೆಗಳಲ್ಲಿ ಚೆಕ್ ಪಾಯಿಂಟ್ ಅಳವಡಿಸಲಾಗಿದೆ. ಜಿಲ್ಲೆಯಿಂದ ಹೊರಹೋಗುವ ಹಾಗೂ ಹೊರರಾಜ್ಯಗಳಿಂದ ಬರುವ ವಾಹನಗಳ ಬಗ್ಗೆ ಸೂಕ್ತ ನಿಗಾವಹಿಸುವ ಕೆಲಸ ನಡೆಯುತ್ತಿದೆ. ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿರುವ ರೌಡಿಗಳನ್ನು ಠಾಣೆಗೆ ಕರೆದು ಮೇಲಾಧಿಕಾರಿಗಳು ರೌಡಿಪೆರೇಡ್ ನಡೆಸಿ ಅವರ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ.
10 ಗಂಟೆಯೊಳಗೆ ಅಂಗಡಿ ಮುಂಗಟ್ಟುಗಳು ಬಂದ್:
ಇನ್ನು ಸೂಕ್ಮ ಪ್ರದೇಶಗಳಾದ ಬಿಸಿರೋಡು, ಕೈಕಂಬ, ಫರಂಗಿಪೇಟೆ, ಮೆಲ್ಕಾರ್, ಕಲ್ಲಡ್ಕ ಹಾಗೂ ಬಂಟ್ವಾಳ ಪೇಟೆಯಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ರಾತ್ರಿ 10 ಗಂಟೆಯ ಒಳಗೆ ಬಂದ್ ಮಾಡಿಸಲಾಗುತ್ತಿದೆ. ಯುವಕರು ಅನಾವಶ್ಯಕ ಪೇಟೆಯಲ್ಲಿ ತಿರುಗಾಟ ನಡೆಸಿ ನಡೆಯುವ ಅನಾಹುತಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.