ಕುಂದಾಪುರ, ಮೇ 29: ಬೈಂದೂರು ತಾಲೂಕಿನ ಮುದೂರು ಗ್ರಾಮದ ಸೂಲಬೇರು ಎಂಬಲ್ಲಿ ಸಾಕಷ್ಟು ದಿನಗಳಿಂದ ಆತಂಕ ಮೂಡಿಸಿದ ಕಪ್ಪು ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದ್ದು, ಮೇ 29 ರ ಮಂಗಳವಾರ ಬೆಳಗ್ಗೆ ಸುರಕ್ಷಿತವಾಗಿ ಕೊಲ್ಲೂರು ಸಮೀಪದ ಮೂಕಾಂಬಿಕ ಅಭಯರಣ್ಯಕ್ಕೆ ಬಿಡಲಾಯಿತು.
ಸೂಲಬೇರು ಮರ್ಕಡಿ ಜೋಸ್ ಎಂಬುವರ ಸಾಕಿದ್ದ ಸುಮಾರು 22 ಮೇಕೆಗಳು ತಿಂದು ಹಾಕಿದ್ದ ಈ ಚಿರತೆಯ ಉಪಟಳದ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಸಾರ್ವಜನಿಕರು ಕೂಡಾ ಚಿರತೆಯ ಬಗ್ಗೆ ಆತಂಕ ಹೊಂದಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಹಿಡಿಯುವ ಸಲುವಾಗಿ ಮರ್ಕಡಿ ಜೋಸ್ ಮನೆಯ ಸಮೀಪ ಬೋನ್ ಇಟ್ಟಿದ್ದರು. ಮಂಗಳವಾರ ರಾತ್ರಿ ಬೋನಿಗೆ ಆಹಾರದ ಆಸೆಗೆ ನುಗ್ಗಿದ ಮೇಕೆ ಭಕ್ಷಕ ಕಪ್ಪು ಚಿರತೆ ಬೋನಿಗೆ ಬಿದ್ದಿದೆ.
ಬೋನಿಗೆ ಬಿದ್ದಿರುವ ಈ ಕಪ್ಪು ಚಿರತೆಯನ್ನು ಅಪರೂಪದ ಪ್ರಬೇದಕ್ಕೆ ಸೇರಿದೆ ಎನ್ನಲಾಗಿದ್ದು, ಸುಮಾರು 6 ವರ್ಷ ಪ್ರಾಯ ಆಗಿರಬಹುದು. ಅಪರೂಪದ ಕಪ್ಪು ಚಿರತೆಯನ್ನು ನೋಡಲು ಆಸುಪಾಸಿನ ಜನರು ಸೇರಿದ್ದರು. ಕುಂದಾಪುರ ತಾಲೂಕಿನ ಅರಣ್ಯಾಧಿಕಾರಿ ಶರತ್ ಶೆಟ್ಟಿ ಹಾಗೂ ಸಿಬ್ಬಂದಿಗಳು,ಸ್ಥಳೀಯರ ಸಹಕಾರದಿಂದ ಕಾರ್ಯಚರಣೆ ನಡೆಸಿದ್ದರು. ಆದರೆ ಮೇಕೆ ಭಕ್ಷಕ ಎನ್ನಲಾದ ಚಿರತೆ ಇದೇ ಕಪ್ಪು ಚಿರತೆಯೇ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಾಗಿದೆ.