ಪುತ್ತೂರು, ನ.03 (DaijiworldNews/PY): ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಗರದ ದರ್ಬೆ ಬೈಪಾಸ್ ಬಳಿ ನ.2ರ ಸೋಮವಾರದಂದು ಸಂಜೆ ನಡೆದ ಅಪಘಾತದಲ್ಲಿ ಪಾದಾಚಾರಿ ಶಾಲಾ ಬಾಲಕಿ ಹಾಗೂ ಮಹಿಳೆ ಸಾವನ್ನಪ್ಪಿದ್ದಾರೆ.

ಅಪಘಾತಕ್ಕೀಡಾದವರನ್ನು ಪುತ್ತೂರು ನಗರದ ಪಡೀಲ್ ನಿವಾಸಿಗಳಾದ ಗೋಪಿನಾಥ್ ಹಾಗೂ ಕವಿತಾ ದಂಪತಿಯ ಪುತ್ರಿ ಸ್ವಾತಿ (7) ಹಾಗೂ ಗೀತಾ (44) ಎಂದು ಗುರುತಿಸಲಾಗಿದೆ. ಸ್ವಾತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗೀತಾ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಸ್ವಾತಿಯ ಅಕ್ಕ ಅನನ್ಯಾ (9) ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಥಾಮಸ್ ಎಂಬವರು ಮಂಗಳೂರಿನಿಂದ ಸುಳ್ಯದತ್ತ ಕಾರು ಚಲಾಯಿಸುತ್ತಿದ್ದ ಕಾರು ದರ್ಬೆ ಬೈಪಾಸ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದಿದ್ದು, ನಂತರ ಮುಂಭಾಗದಲ್ಲಿ ನಿಂತಿದ್ದ ಸವಣೂರಿನ ಉಬೈದ್ ಅವರ ಕಾರಿಗೆ ಡಿಕ್ಕಿ ಹೊಡೆದು ನಿಂತಿದೆ. ಕಾರು ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ದರ್ಬೆ ಬೈಪಾಸ್ ಜಂಕ್ಷನ್ ಬಳಿಯ ಸಭಾಭವನದ ಸಿಬ್ಬಂದಿಯಾಗಿರುವ ಗೋಪಿನಾಥ್ ಅವರು ಅಲ್ಲೇ ಒಂಡು ಕೊಠಡಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಸ್ಥಳೀಯ ನಿವಾಸಿಯಾಗಿದ್ದ ಗೀತಾ ಕೂಡಾ ಅದೇ ಸಭಾಂಗಣದಲ್ಲಿ ಕೆಲಸ ಮಾಡುತ್ತಿದ್ದರು. ಗೀತಾ ಅವರು ಸ್ವಾತಿ ಹಾಗೂ ಅನನ್ಯಾರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಮೃತಪಟ್ಟ ಸ್ವಾತಿ ಇಲ್ಲಿನ ಮಾಯಿದೇವುಸ್ ಶಾಲೆಯಲ್ಲಿ 2ನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಅನನ್ಯಾ 3ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ
ಪುತ್ತೂರು ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.