ಬಂಟ್ವಾಳ, ನ. 03 (DaijiworldNews/MB) : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂಡಿ ಶ್ಯಾಮರಾವ್ (97) ಅವರು ಮಂಗಳವಾರ ಬೆಳಿಗ್ಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕೆಲವು ತಿಂಗಳಿನಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಎಂಡಿ ಶ್ಯಾಮರಾವ್ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು 1942ರ ಬಳಿಕ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಾಂಗ್ರೆಸ್ ಸೇವಾದಳ ಸೇರಿದ್ದ ಅವರು ಗುಪ್ತವಾಗಿ ಸ್ವಾತಂತ್ರ್ಯ ಚಳುವಳಿಗೆ ನೆರವಾಗುತ್ತಿದ್ದರು.
ಅವರನ್ನು ಇದೇ ಕಾರಣಕ್ಕಾಗಿ 1946ರಲ್ಲಿ ಬಂಧಿಸಲಾಗಿದ್ದು ಶಿವಮೊಗ್ಗದಲ್ಲಿ ಎರಡು ತಿಂಗಳು ಜೈಲುವಾಸ ಅನುಭವಿಸಿದ್ದರು.
ಎಂಡಿ ಶ್ಯಾಮರಾವ್ ಅವರು ಮೂಲತಃ ಬಿಸಿರೋಡ್ನವರಾಗಿದ್ದು ಶಿವಮೊಗ್ಗದಲ್ಲಿ ಪುತ್ರನ ಮನೆಯಲ್ಲಿ ತಂಗಿದ್ದರು. ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಕಲ್ಲಡ್ಕದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.