ಮಂಗಳೂರು, ಮೇ 30: ಕರಾವಳಿಗೆ ಅಬ್ಬರಿಸಿ ಕಾಲಿಟ್ಟ ಮುಂಗಾರು ಮಾರುತಕ್ಕೆ ಅವಿಭಜಿತ ಜಿಲ್ಲೆ ಅಕ್ಷರಶಃ ಬೆಚ್ಚಿದ್ದು, ಇಡೀ ಮಂಗಳೂರು ನಗರ ಅಸ್ತವ್ಯಸ್ತವಾಗಿದೆ. ಇನ್ನು ಮಳೆಯಿಂದ ಸೃಷ್ಟಿಯಾದ ಅನಾಹುತಗಳ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಹಿತಿ ಪಡೆಯುತ್ತಿದ್ದು, ಸಂತ್ರಸ್ತರ ರಕ್ಷಣೆಗೆ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರದಿಂದ ಸಕಲ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.
ಮಂಗಳೂರು ಮತ್ತು ಉಡುಪಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ಕಳುಹಿಸಲಾಗಿದ್ದು, ಮಳೆ ಹಾನಿಯಿಂದಾಗುವ ತೀವ್ರತೆ ಕಡಿಮೆಗೊಳಿಸಲು ಮತ್ತು ಸಂತ್ರಸ್ತರ ಪ್ರಾಣಹಾನಿ ತಪ್ಪಿಸಲು, ಹಾಗೂ ಪರಿಹಾರ ಒದಗಿಸಲು ತಕ್ಷಣ ಸೂಚಿಸಲಾಗಿದೆ. ಸಮುದ್ರ ತೀರ ಪ್ರದೇಶಗಳಲ್ಲಿ ಕಡಲ ಕೊರತೆ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಬಗ್ಗೆ ನಿಗಾ ಇಡಲೂ ಸೂಚಿಸಲಾಗಿದೆ. ಇನ್ನು ಕರಾವಳಿಯಲ್ಲಿ ಅತಿವೃಷ್ಟಿಯ ಈ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರಕಾರ ಎಲ್ಲಾ ರೀತಿ ಸಹಕಾರ ನೀಡಲು ಸನ್ನದ್ದವಾಗಿದೆ. ಸಾರ್ವಜನಿಕರೂ ಈ ನಿಟ್ಟಿನಲ್ಲಿ ಸರಕಾರದೊಂದಿಗೆ ಸಹಕರಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ತಿಳಿಸಿದ್ದಾರೆ.