ಕಾಸರಗೋಡು, ನ. 03 (DaijiworldNews/MB) : ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಹಾಗೂ ಶರತ್ ಲಾಲ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಕೇರಳ ಸರಕಾರ ಸಲ್ಲಿಸರುವ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.

ಸಿಬಿಐ ಪರ ಹಾಜರಾಗಬೇಕಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರವರ ಅನಾನುಕೂಲತೆ ಹಿನ್ನಲೆಯಲ್ಲಿ ಮುಂದೂಡಿದ್ದು, ದೀಪಾವಳಿ ಬಳಿಕ ಅರ್ಜಿಯನ್ನು ಕೈಗೆತ್ತಿಕೊಳ್ಳಲಿದೆ.
ಪ್ರಕರಣದ ವಿಚಾರಣೆಗೆ ರಾಜ್ಯ ಸರಕಾರ ಸಹಕಾರ ನೀಡುತ್ತಿಲ್ಲ ಎಂದು ಸಿಬಿಐ ಸೋಮವಾರ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.
ಕಳೆದ ಅಕ್ಟೋಬರ್ನಲ್ಲೇ ವಿಚಾರಣೆ ಆರಂಭಿಸಿದ್ದರೂ ಕ್ರೈಂ ಬ್ರಾಂಚ್ ಈವರೆಗೆ ನಡೆಸಿದ ತನಿಖೆಯ ದಾಖಲೆಗಳನ್ನು ನೀಡುವಂತೆ ಕೋರಿದ್ದರೂ ಇದುವರೆಗೂ ನೀಡಿಲ್ಲ ಎಂದು ಸಿಬಿಐ ಸುಪ್ರಿಂ ಕೋರ್ಟ್ಗೆ ಮನವರಿಕೆ ಮಾಡಿದೆ.
ಕಡತಗಳನ್ನು ಹಸ್ತಾಂತರಿಸುವಂತೆ ಸಿಬಿಐ ಏಳು ಬಾರಿ ಕ್ರೈಂ ಬ್ರಾಂಚ್ ಪತ್ರ ಬರೆದಿತ್ತು. ಆದರೆ ಕಡತಗಳನ್ನು ನೀಡಿಲ್ಲ. ಕೇರಳ ಸರಕಾರದ ಅಸಹಕಾರದಿಂದ ತನಿಖೆ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸಿಬಿಐ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಪಿಧಾವಿತ್ನಲ್ಲಿ ಉಲ್ಲೇಖಿಸಿದೆ.
2019 ರ ಫೆಬ್ರವರಿ 17 ರಂದು ರಾತ್ರಿ ಪೆರಿಯದಲ್ಲಿ ಕೃತ್ಯ ನಡೆದಿತ್ತು. ಕೃತ್ಯದಲ್ಲಿ ಸಿಪಿಎಂ ಸ್ಥಳೀಯ ಮುಖಂಡ ಸೇರಿದಂತೆ 14 ಮಂದಿ ಆರೋಪಿಗಳಿದ್ದಾರೆ.