ಉಳ್ಳಾಲ, ನ. 03 (DaijiworldNews/MB) : ಮಂಗಳೂರಿನ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ ಆರ್ಎಸ್ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.











ಸಾಮಾಜಿಕ ಜಾಲತಾಣದಲ್ಲಿ ಕಲ್ಲಡ್ಕ ಭಟ್ ಅವರ ವಿಡಿಯೋ ವೈರಲ್ ಆದ ಕೂಡಲೇ, ಕೆಲವು ನೆಟ್ಟಿಗರು ಪ್ರಭಾಕರ್ ಭಟ್ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ನವೆಂಬರ್ 1 ರ ಭಾನುವಾರ ಕಿನ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಭಾಕರ್ ಭಟ್ ಅವರು, "ಮುಸ್ಲಿಂ ಪ್ರಾಬಲ್ಯದ ಉಳ್ಳಾಲ ಕ್ಷೇತ್ರವು ಪಾಕಿಸ್ತಾನವಾಗಿ ಮಾರ್ಪಟ್ಟಿದೆ. ಪಾಕಿಸ್ತಾನ ಹೇಗೆ ಅಸ್ತಿತ್ವಕ್ಕೆ ಬಂತು? ಅದಕ್ಕೆ ಕಾರಣ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದ್ದು. ಹಾಗಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದವು. ಈಗ ನೀವು ಉಳ್ಳಾಲಕ್ಕೆ ಹೋದರೆ ಅದು ಪಾಕಿಸ್ತಾನದಂತೆ ಆಗಿದೆ. ಅದು ಬೇರೆ ಆಗಲು ಸಾಧ್ಯವೇ?" ಎಂದು ಹೇಳಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವಾಗಿ ಟ್ರೋಲ್ ಮಾಡುತ್ತಿರುವ ನೆಟ್ಟಿಗರೋರ್ವರು, ''ಮಂಗಳೂರಿನಿಂದ ಉಳ್ಳಾಲಕ್ಕೆ ಹೋಗುವ ಬಸ್ಸುಗಳನ್ನು ಇನ್ನು ಮುಂದೆ ಅಂತರಾಷ್ಟ್ರೀಯ ಸಾರಿಗೆ ಎಂದು ಘೋಷಿಸಬೇಕು'' ಎಂದು ಬರೆದುಕೊಂಡಿದ್ದಾರೆ.
ಇನ್ನೋರ್ವ ಸಾಮಾಜಿಕ ಜಾಲತಾಣ ಬಳಕೆದಾರರು, "ಉಳ್ಳಾಲಕ್ಕೆ ಹೋಗಲು ಇನ್ನು ಮುಂದೆ ಬಸ್ ಟಿಕೆಟ್ ಇದ್ದರೆ ಸಾಲದು ಪಾಸ್ಪೋರ್ಟ್ ಕೂಡ ಬೇಕು'' ಎಂದಿದ್ದಾರೆ.
ಮತ್ತೋರ್ವ ಬಳಕೆದಾರರು, ಉಳ್ಳಾಲಕ್ಕೆ ಸಂಚರಿಸುವ ಖಾಸಗಿ ಬಸ್ನ ಮೇಲೆ 'ಸ್ಟೇಟ್ ಬ್ಯಾಂಕ್ ಟು ಪಾಕಿಸ್ತಾನ' ಎಂದು ಬರೆದಿರುವಂತೆ ಚಿತ್ರವೊಂದನ್ನು ಹಂಚಿದ್ದಾರೆ.
ಈ ಪ್ರದೇಶವು ಹಲವು ಕೋಮು ಘಟನೆಗಳ ನಿದರ್ಶನವನ್ನು ಹೊಂದಿದ್ದರೂ ಕೂಡಾ ಪ್ರಸ್ತುತ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಈ ಹೇಳಿಕೆಯನ್ನು ಜನರು ಲಘುವಾಗಿ ತೆಗೆದುಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಹಾಗೆಯೇ ತಮಾಷೆಯ ಮೇಮ್ಗಳನ್ನು ಪೋಸ್ಟ್ ಮಾಡುವ ಮೂಲಕ ಬುದ್ಧಿವಂತಿಕೆಯಿಂದ ವರ್ತಿಸಿದ್ದಾರೆ.