ಮಂಗಳೂರು, ನ. 03 (DaijiworldNews/MB) : "ನವೆಂಬರ್ 5 ರಂದು ಟಿ ವಿ ರಾಮನ್ ಪೈ ಹಾಲ್ನಲ್ಲಿ ನಡೆಯಲಿರುವ ಬಿಜೆಪಿಯ ವಿಶೇಷ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನವೆಂಬರ್ 4 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾಹಿತಿ ನೀಡಿದರು.




ನವೆಂಬರ್ 3 ರ ಮಂಗಳವಾರ ನಗರದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, "ಸಿಎಂ ಯಡಿಯೂರಪ್ಪ ಅವರು ಸಂಜೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು ಸಂಜೆ 7 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಳಿದ್ದಾರೆ. ಜೊತೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕೂಡಾ ಇರಲಿದ್ದಾರೆ" ಎಂದು ತಿಳಿಸಿದ್ದಾರೆ.
"ಈ ವಿಶೇಷ ಕಾರ್ಯಕಾರಿ ಸಭೆಯನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಲಿದ್ದು, ಸಚಿವರಾದ ಸಿ ಟಿ ರವಿ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಬಳಿಕ ಮರುದಿನ ರಾತ್ರಿ 11: 30 ಕ್ಕೆ ನಡೆಯುವ ಕೋರ್ ಸಮಿತಿ ಸಭೆಯಲ್ಲಿ ಸಿಎಂ ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ 7: 30 ಕ್ಕೆ ಬೆಂಗಳೂರಿಗೆ ತೆರಳಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅಧಿಕಾರ ವಹಿಸಿಕೊಂಡ ನಂತರ ಇದು ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಕಾರ್ಯಕಾರಿ ಸಭೆ ನಡೆಸಲಾಗುತ್ತಿದೆ" ಎಂದು ಹೇಳಿದರು.
ಕಾರ್ಯಕಾರಿ ಸಭೆಗೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಸಂಚಾಲಕರು, ಸಹ-ಸಂಚಾಲಕರು, ವಿವಿಧ ಘಟಕಗಳ ಮುಖ್ಯಸ್ಥರು, ಕೋರ್ ಸಮಿತಿ ಸದಸ್ಯರು ಮತ್ತು ಪ್ರಾದೇಶಿಕ ಸಂಘಟನಾ ಕಾರ್ಯದರ್ಶಿಗಳನ್ನು ಆಹ್ವಾನಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
"ಸಭೆಯ ಅಜೆಂಡಾವು ಸಂಘಟನಾತ್ಮಕ ದೃಷ್ಟಿಯಿಂದ ನಾಯಕರ ಅಭಿಪ್ರಾಯದ ಮೇಲೆ ಕೇಂದ್ರೀಕೃತವಾಗಿರುತ್ತದೆ. ಪಕ್ಷವನ್ನು ಬಲಪಡಿಸಲು ಮತ್ತು ಪಕ್ಷದ ಮುಂದಿನ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಅಭಿವೃದ್ಧಿ ಕಾರ್ಯಗಳ ಕುರಿತು ಮುಂದಿನ ನಿರ್ಧಾರಗಳನ್ನು ಚರ್ಚಿಸಲಾಗುವುದು. ಮುಂಬರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಿಗೆ ಈಗಲೇ ಕಾರ್ಯತಂತ್ರ ರೂಪಿಸಲಾಗುವುದು" ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.