ಕಾಸರಗೋಡು, ನ. 04 (DaijiworldNews/MB) : ಆರೋಪಿಗಳನ್ನು ಬೆನ್ನಟ್ಟಿದ ಪೊಲೀಸ್ ಜೀಪಿಗೆ ಕಾರು ಡಿಕ್ಕಿ ಹೊಡೆಸಿ ಪರಾರಿಯಾದ ಘಟನೆ ನಿನ್ನೆ ರಾತ್ರಿ ಮಂಜೇಶ್ವರ ಸಮೀಪದ ಕೊಡ್ಲಮೊಗರು ಎಂಬಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಬಂದ್ಯೋಡು ಸಮೀಪದ ಅಡ್ಕದಲ್ಲಿ ನಡೆದ ಗುಂಡು ಹಾರಾಟ ಹಾಗೂ ಕೊಲೆ ಯತ್ನ ಪ್ರಕರಣದ ಆರೋಪಿಗಳನ್ನು ಬೆನ್ನಟ್ಟುತ್ತಿದ್ದಾಗ ಘಟನೆ ನಡೆದಿದೆ. ಪ್ರಕರಣದ ಮೊದಲ ಆರೋಪಿ ಮೊಯಿದಿನ್ ಶಬೀರ್ ಹಾಗೂ ತಂಡವು ತೆರಳುತ್ತಿದ್ದ ಕಾರನ್ನು ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ತಡೆದರೂ ಕಾರು ಪೊಲೀಸರ ಜೀಪಿಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದೆ. ಪೊಲೀಸರು ಅಪಾಯದಿಂದ ಪಾರಾಗಿದ್ದಾರೆ.
ಖಚಿತ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕೊಡ್ಲಮೊಗರು ಎಂಬಲ್ಲಿ ಪೊಲೀಸರು ಅಡ್ಡಗಟ್ಟಿದರೂ ಕಾರು ಸಹಿತ ಪರಾರಿಯಾಗಿದ್ದಾರೆ. ಆರೋಪಿಗಳು ಕರ್ನಾಟಕಕ್ಕೆ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ಬೆಳಿಗ್ಗೆ ಬಂದ್ಯೋಡು ಅಡ್ಕದಲ್ಲಿ ಗುಂಡಿನ ದಾಳಿ ನಡೆಸಿ, ಕೊಲೆ ಯತ್ನ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಈಗಾಗಲೇ ಬಂಧಿಸಲಾಗಿದ್ದು, 10 ಮಂದಿ ತಲೆಮರೆಸಿಕೊಂಡಿದ್ದಾರೆ.