ಮಂಗಳೂರು, ನ. 04 (DaijiworldNews/MB) : "ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಂಸ್ಥೆಗೆ ನೀಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಮಹಮ್ಮದ್ ಬಡಗನ್ನೂರು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ದೊಡ್ಡ ಸವಾಲನ್ನು ಎದುರಿಸುತ್ತಿದೆ. ಬಿಜೆಪಿ ಆಡಳಿತವು ದ. ಕ. ಜಿಲ್ಲೆಯ ಅಸ್ತಿತ್ವಕ್ಕೆ ಧಕ್ಕೆ ತಂದಿದೆ" ಎಂದು ಆರೋಪಿಸಿದರು.


ಈ ಬಗ್ಗೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್ಗೆ ಹಸ್ತಾಂತರಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮ ಮತ್ತು ವಿಜಯ ಬ್ಯಾಂಕ್ ವಿಲೀನಗೊಳಿಸುವ ನಿರ್ಧಾರವು ಜಿಲ್ಲೆಯ ಘನತೆಗೆ ಧಕ್ಕೆ ತಂದಿದೆ" ಎಂದು ಹೇಳಿದ್ದಾರೆ.
"ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್ಗೆ ಹಸ್ತಾಂತರಿಸುವ ಮೂಲಕ ಕೇಂದ್ರ ಸರ್ಕಾರ ಪರೋಕ್ಷವಾಗಿ ಜರ್ಮನಿಗೆ ವಿಮಾನ ನಿಲ್ದಾಣವನ್ನು ಮಾರಾಟ ಮಾಡಿದೆ" ಎಂದು ಅವರು ದೂರಿದರು.
"ಈ ಕ್ರಮದಿಂದಾಗಿ ಹಲವಾರು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರವಾಸಿಗರು ತೆರಿಗೆಯ ಹೊರೆ ಎದುರಿಸಬೇಕಾಗುತ್ತದೆ. ಮಂಗಳೂರು ಬಂದರನ್ನು ಸಹ ಖಾಸಗೀಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ" ಎಂದು ಹೇಳಿದರು.
"ನಮ್ಮ ಸಂಸದ ನಳಿನ್ ಕುಮಾರ್ ಕಟೀಲ್ ಈ ಭೂಮಿಯ ಸಂಸ್ಕೃತಿಯನ್ನು ಕಾಪಾಡಲು ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ. ಬದಲಾಗಿ ಅವರು ಭಾಷಣ ಮಾಡುವುದರಲ್ಲೇ ಮಗ್ನರಾಗಿದ್ದಾರೆ. ಅವರು ಜನರ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲ" ಎಂದು ನಳಿನ್ ವಿರುದ್ದ ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ದ ತಮ್ಮ ವಾಗ್ದಾಳಿ ಮುಂದುವರೆಸಿದ ಅವರು, ಪ್ರತಿ ಲೋಡ್ಗೆ 2 ಸಾವಿರ ರೂ.ಗಳಿಗೆ ಮರಳು ನೀಡಲಾಗುತ್ತದೆ ಎಂಬ ನಳಿನ್ ಅವರ ಭರವಸೆಯ ಬಗ್ಗೆ ಪ್ರತಿಕ್ರಿಯಿಸಿದರು. "ನಳಿನ್ ಕುಮಾರ್ ಅವರು ಜನರ ಜೀವನದೊಂದಿಗೆ ಆಟವಾಡುತ್ತಿದ್ದಾರೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಜಿಲ್ಲೆಯಲ್ಲಿ ಬಿಜೆಪಿ ಆಡಳಿತ ಸಂಪೂರ್ಣ ವಿಫಲವಾಗಿದೆ" ಎಂದರು.
ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಅವರ ವಿರುದ್ದ ಕಿಡಿಕಾರಿದ ಅವರು, "ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದಾಗಿ ಏನಾದರೂ ಉಪಯೋಗವಾಗಿದೆಯೇ?" ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಜಿಲ್ಲೆಯ ತಾಲ್ಲೂಕುಗಳಲ್ಲಿ ಪರಿಶೀಲನಾ ಸಭೆ ನಡೆಸಲು ವಿಫಲರಾಗಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ" ಎಂದು ಹೇಳಿದರು.
''ಜಿಲ್ಲೆಯಲ್ಲಿ ನಡೆದ ಹಲವಾರು ಅಹಿತಕರ ಘಟನೆಗಳನ್ನು ತಡೆಯುವಲ್ಲಿ ಬಿಜೆಪಿ ಆಡಳಿತ ವಿಫಲವಾಗಿದೆ'' ಎಂದು ಆರೋಪಿಸಿದ ಅವರು, ಇದೇ ಪರಿಸ್ಥಿತಿ ಮುಂದುವರಿದರೆ, ''ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಜನರೊಂದಿಗೆ ಸೇರಿ ಸರ್ಕಾರದ ವೈಫಲ್ಯದ ವಿರುದ್ಧ ಆಂದೋಲನ ನಡೆಸಲಿದೆ'' ಎಂದು ತಿಳಿಸಿದರು.
ಈ ಸಂದರ್ಭದಲ್ಲೇ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾಲಯದ, ವಿಶ್ವವಿದ್ಯಾಲಯದ ಸಂಜೆ ಕಾಲೇಜು ಪಿಜಿ ತುಳು ವಿಭಾಗ, ನಮ್ಮ ತುಳುನಾಡು ಟ್ರಸ್ಟ್ ಮತ್ತು ತುಳುವರ್ಲ್ಡ್ ಕುಡ್ಲಾ ಜಂಟಿಯಾಗಿ ಆಯೋಜಿಸಿದ್ದ ತುಳು ಅಂತರರಾಷ್ಟ್ರೀಯ ಗೋಷ್ಠಿ ರದ್ದತಿ ಕುರಿತು ಮಾತನಾಡಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಉಳ್ಳಾಲ, "ಜೆಎನ್ಯು ನಿವೃತ್ತ ಪ್ರಾಧ್ಯಾಪಕ ಡಾ.ಪುರುಷೋತಮ್ ಬಿಳಿಮಳೆ ಅವರನ್ನು ಈ ಗೋಷ್ಠಿಗೆ ಆಹ್ವಾನಿಸಿದ ನಂತರ, ಈ ಗೋಷ್ಠಿಯನ್ನು ಯಾಕಾಗಿ ರದ್ದುಪಡಿಸಲಾಯಿತು? ಎಬಿವಿಪಿ ಇದರ ವಿರುದ್ಧ ಧ್ವನಿ ಎತ್ತಬೇಕು. ಸಿಂಡಿಕೇಟ್ ಸದಸ್ಯರೊಬ್ಬರು ಇದನ್ನು ವಿರೋಧಿಸಿದ ಬಳಿಕ ಗೋಷ್ಠಿಯನ್ನು ಯಾಕೆ ರದ್ದುಪಡಿಸಲಾಗಿದೆ ಎಂದು ಹೇಳಬೇಕು'' ಎಂದರು.
ಜೆಎನ್ಯು ನಿವೃತ್ತ ಪ್ರಾಧ್ಯಾಪಕ ಡಾ.ಪುರುಷೋತಮ್ ಬಿಳಿಮಳೆ ಅವರನ್ನು ತಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಿದ ಅವರು, ಇದರ ವಿರುದ್ಧ ಮಾತನಾಡಲು ಉಪಕುಲಪತಿಗೆ ಧ್ವನಿ ಇಲ್ಲ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನೀರಜ್ ಚಂದ್ರ ಪಾಲ್, ಕಾರ್ಯದರ್ಶಿ ಪ್ರೇಮ್ ಬಳ್ಳಾಲ್ ಭಾಗ್, ವಸಂತ್ ಮೊದಲಾದವರು ಉಪಸ್ಥಿತರಿದ್ದರು.