ಉಡುಪಿ, ನ. 04 (DaijiworldNews/MB) : ಸಂತೆಕಟ್ಟೆ-ಕಲ್ಯಾಣಪುರ ಚತುಷ್ಪಥ ರಸ್ತೆ ಅಗಲೀಕರಣ ಕೆಲಸ ಭರದಿಂದ ಸಾಗುತ್ತಿದೆ. ಈಗಾಗಲೇ ಗಡಿಗುರುತು ಮಾಡಿ, ಭೂಸ್ವಾಧೀನ ಕಾರ್ಯ ಮುಗಿದು ರಸ್ತೆ ಕಾಮಗಾರಿಗೆ ತಡೆಯೊಡ್ಡುವ ಮರಗಳನ್ನು ಕಡಿದು ಸಮತಟ್ಟುಗೊಳಿಸಲಾಗುತ್ತಿದೆ. ರಸ್ತೆಯ ಇಕ್ಕೆಲದಲ್ಲಿ ಚರಂಡಿ ವ್ಯವಸ್ಥೆಗೆ ಗುಂಡಿ ಮಾಡುವ ಕೆಲಸ ನಡೆಯುತ್ತಿದೆ.














3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಾಮಗಾರಿಯು, ಸಂತೆಕಟ್ಟೆ-ಕಲ್ಯಾಣಪುರದ ಅಭಿವೃದ್ದಿಗೆ ಸಾಕಷ್ಟು ಸಹಕಾರಿಯಾಗಲಿದೆ. ಸಂತೆಕಟ್ಟೆ ಜಂಕ್ಷನ್ನಿಂದ ಕಲ್ಯಾಣಪುರಕ್ಕೆ ಸಾಗುವಾಗ ಸಾಕಷ್ಟು ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ, ಚರ್ಚ್ ಕಾಣಸಿಗುತ್ತವೆ. ಇನ್ನೊಂದು ಕಡೆ ಕೆಮ್ಮಣ್ಣು, ಹೂಡೆ, ತೊಟ್ಟಂ ಕೋಡಿಬೆಂಗ್ರೆಯನ್ನು ಸಂಪರ್ಕಿಸುವ ಮಾರ್ಗವಾಗಿದೆ. ಅಲ್ಲದೆ ಇದು ಪ್ರವಾಸಿಗರಿಗೆ ಹೆಚ್ಚು ಬೇಡಿಕೆ ಇರುವ ಸ್ಥಳವಾಗಿದ್ದು ಹೆಚ್ಚುತ್ತಿರುವ ವಾಹನ ಸಂಚಾರದಿಂದ ಅಲ್ಲದೆ ಸದಾ ಜನಸಂಚಾರ ಕೂಡ ಇರುವುದರಿಂದ ಈ ರಸ್ತೆಯ ಅಭಿವೃದ್ದಿ ಅನಿವಾರ್ಯವಾಗಿತ್ತು.
"ಪ್ರಸ್ತುತ ಈ ರಸ್ತೆಯು 5.5 ಮೀಟರ್ ಉದ್ದವಿದ್ದು, ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅದನ್ನು 7 ಮೀ. 1.1 ಕಿ.ಮೀ ವರೆಗೆ ವಿಸ್ತರಿಸಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ಕೆಮ್ಮಣ್ಣು-ಹೂಡೆ-ಬೆಂಗ್ರೆ ರಸ್ತೆಯೂ ಕೂಡ ಅಗಲೀಕರಣವಾಗಲಿದೆ. ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ತೆ ಕೂಡ ಮಾಡಲಾಗುತ್ತಿದೆ" ಎಂದು ಪಿಡಬ್ಲ್ಯೂಡಿ ಇಲಾಖೆಯ ಇಂಜಿನಿಯರ್ ಜಗದೀಶ್ ಭಟ್ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ ರೂ 3 ಕೋಟಿ ರೂಪಾಯಿ ಅನುದಾನ ಸಂತೆಕಟ್ಟೆ ಕಲ್ಯಾಣಪುರ ರಸ್ತೆಗೆ ಬಿಡುಗಡೆಯಾಗಿದ್ದು ಅಲ್ಲಿ ಜನರಿಂದ ರಸ್ತೆ ಅಗಲೀಕರಣದ ಬೇಡಿಕೆಯಿತ್ತು. ಅಪಾಯಕಾರಿಯಾಗಿದ್ದ ಎರಡು ಮರಗಳನ್ನು ಅರಣ್ಯ ಇಲಾಖೆಯ ಒಪ್ಪಿಗೆಯೊಂದಿಗೆ ತೆರವು ಮಾಡಲಾಗಿದೆ. ಅಲ್ಲದೆ ರಸ್ತೆಯ ಬದಿಯಲ್ಲಿ ಯಾವುದೇ ಪರವಾನಗಿ ಇಲ್ಲದಿರುವ ಐದಾರು ಗೂಡಂಡಿಗಳಿದ್ದವು. ರಸ್ತೆಯ ಅಗಲೀಕರಣಕ್ಕಾಗಿ ಅವುಗಳನ್ನು ತೆರವು ಮಾಡಿಸಲಾಯಿತು.
ಆರು ಗೂಡಂಗಡಿಗೆ ಪ್ರತ್ಯೇಕ ಝೋನ್:
ಇಲ್ಲಿದ್ದ ಮೀನು ಮಾರುಕಟ್ಟೆಯನ್ನು ಈಗಾಗಲೇ ತೆರವುಗೊಳಿಸಿದ್ದು, ಪಕ್ಕದಲ್ಲಿನ ಸರಕಾರಿ ಜಾಗದಲ್ಲಿ ತಾತ್ಕಲಿಕವಾದ ಶೆಡ್ ನಿರ್ಮಿಸಿ ಕೊಡಲಾಗಿದೆ. ರಸ್ತೆ ಬದಿಯಲ್ಲಿ ಆರು ಪರವಾನಗಿ ಹೊಂದಿರದ ಗೂಡಂಗಡಿಗಳಿದ್ದವು. ಅದನ್ನು ರಸ್ತೆ ಅಗಲೀಕರಣಗೊಳಿಸುವ ಉದ್ದೇಶದಿಂದ ತೆರವುಗೊಳಿಸಲಾಗಿದೆ. ಅಲ್ಲದೆ ಅವರಿಗೆ ಪರವಾನಗಿ ನೀಡುವಂತೆ ಶಾಸಕರು ನಗರ ಸಭೆಗೆ ಸೂಚಿಸಿದ್ದಾರೆ. ಅವರಿಗೆ ವ್ಯಾಪಾರ ಮಾಡಲು ಅನುಕೂಲವಾಗುವಂತೆ, ಪ್ರತ್ಯೇಕ ಝೋನ್ ನಿರ್ಮಾಣ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗಿದೆ.
ಇನ್ನು ಸಂತೆಕಟ್ಟೆ ಜಂಕ್ಷನ್ನಲ್ಲಿ ಈಗಾಗಲೇ ಹೆಚ್ಚುತ್ತಿರುವ ಟ್ರಾಫಿಕ್ನಿಂದ ಸಂಚಾರದ ತೊಂದರೆ ಅನುಭವಿಸುತ್ತಿರುವವರಿಗೆ ಇನ್ನು ಕೊಂಚ ಟ್ರಾಫಿಕ್ ಮುಕ್ತವಾಗಬಹುದು. ಈ ಜಂಕ್ಷನ್ನಲ್ಲಿ ಸುಂದರವಾದ ವೃತ್ತ ನಿರ್ಮಿಸಲಾಗುವುದು. ಇದಕ್ಕಾಗಿ ಸುಮಾರು 2 ಕೋಟಿ ಹೆಚ್ಚುವರಿ ಅನುದಾನ ಒದಗಿಸುವಂತೆ ಸಂಬಂದಪಟ್ಟ ಇಲಾಖೆಗೆಯೊಂದಿಗೆ ಚರ್ಚಿಸಲಾಗಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.