ಮಂಗಳೂರು, ನ. 04 (DaijiworldNews/HR): ಪಾದುವ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್) ನ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧನೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಿತು.





ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಾದುವ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂದನೀಯ ಗುರುಗಳಾದ ಫಾದರ್ ವಿನ್ಸೆಂಟ್ ಮೊಂತೆರೋ ರವರು ಹುಮ್ಮಸ್ಸಿನಿಂದ ಅನೇಕರು ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ ಆದರೆ ತೆಗೆದುಕೊಂಡ ಪ್ರತಿಜ್ಞೆಯನ್ನು ಸಮಯ ಕಳೆದಂತೆ ಮರೆತುಬಿಡುತ್ತಾರೆ. ಹಾಗಾಗಬಾರದು ನನ್ನಿಂದಾದಷ್ಟು ಇತರರ ಸೇವೆಯನ್ನು ಮಾಡಿ ಜೀವನವನ್ನು ಸಾರ್ಥಕಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನೃತ್ಯ ನಿರ್ದೇಶಕ ವಿ.ಜೆ ಡಿಕ್ಸನ್, ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್) ನ ಸ್ವಯಂಸೇವಕರು ಶಿಸ್ತಿನ ಸಿಪಾಯಿಗಳು ದೇಶ ಸೇವೆಯನ್ನು ಮಾಡಬೇಕಾದರೆ ಸೈನ್ಯವನ್ನೇ ಸೇರ ಬೇಕಾಗಿಲ್ಲ ತನ್ನ ನೆರೆಹೊರೆಯಲ್ಲಿ ಅವಶ್ಯವಿರುವ ಅವರಿಗೆ ಸಹಾಯ ಮಾಡಿದರೆ ದೇಶಸೇವೆ ಮಾಡಿದಂತೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಜೆಸಿಐ ಸಾರಥಿಯ ಅಧ್ಯಕ್ಷ ಹಾಗೂ ಕಾಲೇಜಿನ ಹಳೆವಿದ್ಯಾರ್ಥಿ ಶ್ರೀ ಸ್ಕಂದ ಮಾಳವ ಮಾತನಾಡಿ ಎನ್ಎಸ್ಎಸ್ ವ್ಯಕ್ತಿಯ ಜೀವನದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗ್ಲಾಡೀಸ್ ಅಲೋಶಿಯಸ್ ರವರು ಕೋವಿಡ್ ನಿಂದಾಗಿ ಉಪನ್ಯಾಸಕರು ಆನ್ಲೈನ್ ಮೂಲಕ ವಿದ್ಯಾರ್ಥಿಗಳಿಗಾಗಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯನ್ನು ಹಮ್ಮಿಕೊಂಡಿರುವುದು ಪ್ರಸ್ತಾಪಿಸಿದರು. ಉಪನ್ಯಾಸಕರ ಹಾಗೂ ಸಿಬ್ಬಂದಿಗಳ ಪರಿಶ್ರಮವನ್ನು ಪ್ರಶಂಸಿಸಿದರು.
ಎನ್ಎಸ್ಎಸ್ನ ಯೋಜನಾಧಿಕಾರಿಯಾದ ಯತಿರಾಜ್ ಸ್ವಾಗತ ಭಾಷಣವನ್ನು ಮಾಡಿದರು. ಕಾಲೇಜಿನ ಎನ್ಎಸ್ಎಸ್ ಘಟಕದ ಸಹ ಯೋಜನಾಧಿಕಾರಿಯಾದ ಅನಿಲ್ ಡಿ'ಮೆಲ್ಲೊರವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿವೇತನಗಳನ್ನು ವಿತರಿಸಲಾಯಿತು. ರಾಜ್ಯಶಾಸ್ತ್ರ ಮತ್ತು ಸಮಾಜ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಕಾವೇರಿ ಅವರು ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಪಟ್ಟಿಯನ್ನು ವಾಚಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಿವಿಧ ಸ್ಪರ್ಧಾ ಚಟುವಟಿಕೆಗಳಲ್ಲಿ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾಲೇಜಿನ ಎನ್ಎಸ್ಎಸ್ ಘಟಕದ ಸಹ ಯೋಜನಾಧಿಕಾರಿಯಾದ ಸಂಖ್ಯಾಶಾಸ್ತ್ರ ಉಪನ್ಯಾಸಕಿ ರಶ್ಮಿ ಪ್ರಿಯಾ ನಡೆಸಿಕೊಟ್ಟರು.
ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಅನಿತಾ ರೊಡ್ರಿಗಸ್ ವಂದನಾರ್ಪಣೆ ಮಾಡಿದ್ದು, ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ರೇಷ್ಮಾ ವಿನಯ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಿದರು.