ಮಂಗಳೂರು, ಮೇ 30: ಮಂಗಳವಾರ ಸುರಿದ ಭಾರೀ ಮಳೆಗೆ ಬೋಂದೆಲ್ ನಿಂದ ವಾಮಂಜೂರಿಗೆ ಸಾಗುವ ಪಚ್ಚನಾಡಿ ಎಂಬಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆಯೊಂದು ನೀರುಪಾಲಾಗಿದ್ದು ಸೇತುವೆಯ ತೆರವು ಕಾರ್ಯ ಬುಧವಾರ ಬೆಳಗ್ಗಿನಿಂದಲೇ ಆರಂಭಗೊಂಡಿದೆ.
ಹೊಸ ಸೇತುವೆ ನಿರ್ಮಾಣ ಕಾರ್ಯದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸೇತುವೆಯನ್ನು ಇಲ್ಲಿ ನಿರ್ಮಿಸಲಾಗಿತ್ತು. ಆದ್ರೆ ಮಂಗಳವಾರ ಬೆಳಗ್ಗೆಯಿಂದ ಎಡೆಬಿಡದೆ ಸುರಿದ ಮಳೆಗೆ ಸೇತುವೆ ನೀರುಪಾಲಾಗಿ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಈ ರಸ್ತೆಯಲ್ಲಿ ಸಾಗುವ ನೂರಾರು ಪ್ರಯಾಣಿಕರು ಪರದಾಡುವಂತಾಗಿದ್ದು ಸಂಚಾರ ಸ್ಥಗಿತದಿಂದ ಜನ ಕಂಗಾಲಾಗಿದ್ದರು. ಇಂದು ಬೆಳಗ್ಗೆ ಮಳೆ ಕಡಿಮೆಯಾಗಿದ್ದರಿಂದ ನೀರಿನಲ್ಲಿ ಮುಳುಗಿದ್ದ ಕಬ್ಬಿಣದ ವಸ್ತುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
ಇದರ ಮಧ್ಯೆ ಭಾರಿ ಮಳೆಗೆ ಬಾವಿಯೊಂದರ ಆವರಣ ಗೋಡೆ ಕುಸಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಘಟನೆ ಯಾವ ಸ್ಥಳದಲ್ಲಿ ನಡೆದಿದೆ ಎಂಬುದರ ಕುರಿತು ಖಚಿತ ಮಾಹಿತಿ ದೊರಕಿಲ್ಲ, ಜನರು ತುಳು ಭಾಷೆಯಲ್ಲಿ ಮಾತನಾಡುತ್ತಿರುವುದರಿಂದ ಮಂಗಳೂರು ಆಸುಪಾಸಿನಲ್ಲೇ ನಡೆದಿರುವ ಘಟನೆ ಎಂದು ಹೇಳಲಾಗುತ್ತಿದೆ.