ಬೆಂಗಳೂರು, ಮೇ 30 :ರೈತರ ಸಾಲ ಮನ್ನಾ ಅನುಷ್ಟಾನ ಮಾಡಲು ಇನ್ನು 15 ದಿನಗಳ ಕಾಲಾಕಾಶ ನೀಡಿ ಎಂದು ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಕಾಂಗ್ರೆಸ್ ನ ರಾಷ್ಟೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರೈತರ ಸಾಲ ಮನ್ನಾ ಮಾಡುವಾಗ ಯಾವುದೇ ಕಾರಣಕ್ಕೂ ರೈತರಿಗೆ ನೀಡುವ ಹಣ ಪೋಲಾಗಬಾರದು. ಹೀಗಾಗಿ ಎಲ್ಲವನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಇದಕ್ಕಾಗಿ ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ.
ಸರ್ಕಾರ ಆರ್ಥಿಕ ಶಿಸ್ತು ಮೀರಿ ಹೋಗೋದೆ ಇರೋ ತರ ನೋಡಿಕೊಂಡು ಎರಡು ಹಂತದಲ್ಲಿ ಸಾಲ ಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ. ಮೊದಲ ಹಂತವಾಗಿ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿ ರೈತರ ಸಾಲ ಮನ್ನ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಮೊದಲ ಸ್ಕೀಂನಲ್ಲಿ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವ ಭರವಸೆ ನೀಡುತ್ತೇನೆ. ವಾಣಿಜ್ಯ ಬ್ಯಾಂಕ್ ಅಧಿಕಾರಿಗಳು, ಸಹಕಾರಿ ಬ್ಯಾಂಕ್ನ ಅಧಿಕಾರಿಗಳು, ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರುವುದಾಗಿ ಸಿಎಂ ತಿಳಿಸಿದರು. ಮೊದಲ ಅವಧಿಯಲ್ಲಿ 1-04-2009 ರಿಂದ 31-12-2017 ರ ವರೆಗಿನ ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಿಸಿದರು.