ಉಡುಪಿ, ಮೇ 30: ಅನುಮಾಸ್ಪದ ರೀತಿಯಲ್ಲಿ ದನದ ವ್ಯಾಪಾರಿಯೋರ್ವರ ಮೃತದೇಹ ಉಡುಪಿಯ ಪೆರ್ಡೂರು ಸಮೀಪದ ಕಾಫಿ ತೋಟದಲ್ಲಿ ಪತ್ತೆಯಾದ ಘಟನೆ ಮೇ 30 ರ ಬುಧವಾರ ನಡೆದಿದೆ. ಮೃತರನ್ನು ಮಂಗಳೂರಿನ ಜೋಕಟ್ಟೆಯ ನಿವಾಸಿ ಹುಸೈನಬ್ಬ(65) ಎಂದು ಗುರುತಿಸಲಾಗಿದೆ.
ನಿನ್ನೆ ನಾಲ್ವರೊಂದಿಗೆ ತಡರಾತ್ರಿ ಸ್ಕಾರ್ಪಿಯೋ ಹಾಗೂ ಓಮಿನಿ ಕಾರಿನಲ್ಲಿ ಇತರ ಮೂವರೊಂದಿಗೆ ಸೇರಿ ಜಾನುವಾರು ಸಾಗಾಟ ಮಾಡುತ್ತಿದ್ದಾಗ ಪೊಲೀಸರು ಅಡ್ಡಗಟ್ಟಿದ್ದದಾಗ , ಪೊಲೀಸರ ಕಣ್ತಪ್ಪಿಸಿ ಓಡಿದ್ದ ನಾಲ್ವರ ಪೈಕಿ ಹುಸೈನಬ್ಬ ಅವರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.
ಹುಸೈನಬ್ಬ ಶವ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಸಾವಿನ ಬಗ್ಗೆ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬರುತ್ತಿದ್ದು, ಮರಣೋತ್ತರ ವರದಿಯ ಬಳಿಕ ಸ್ಪಷ್ಟತೆ ದೊರಕಲಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಸ್ಥಳದಲ್ಲಿ ಸಂಬಂಧಿಕರು ಹಾಗು ಊರಿನವರು ಜಮಾಯಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಿರಿಯಡ್ಕ ಠಾಣೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷನ್ ನಿಂಬರಗಿ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ವಾಹನದಲ್ಲಿ 12 ಕರುಗಳು ಪತ್ತೆಯಾಗಿದೆ