ಉಡುಪಿ,ನ. 07 (DaijiworldNews/HR): ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ ಮಲ್ಪೆ ವಾಸುದೇವ ಸಾಮಗ(71) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಯಕ್ಷಗಾನ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದ ವಾಸುದೇವ ಸಾಮಗ ಅವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದು, ಅಲ್ಪ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ನಿಧನರಾಗಿದ್ದಾರೆ.
ಇನ್ನು ವಾಸುದೇವ ಸಾಮಗ ಅವರು ತೆಂಕು-ಬಡಗು ತಿಟ್ಟಿನ ಸವ್ಯಸಾಚಿ ಕಲಾವಿದರೆಂದು ಗುರುತಿಸಲ್ಪಟ್ಟಿದ್ದು, ವಾಸುದೇವ ಸಾಮಗರ ತಂದೆ ಮತ್ತು ದೊಡ್ಡಪ್ಪ ಆಗಿನ ಮಹಾನ್ ಕಲಾವಿದರು ಮತ್ತು ಹರಿದಾಸರಾದ ಕಾರಣ ಇವರು ಕೂಡ ಯಕ್ಷಗಾನದ ಒಲವು ಹೊಂದಿದ್ದರು.
ವಾಸುದೇವ ಅವರು ಅನೇಕ ಪ್ರಸಂಗಗಳಲ್ಲಿ ನಾಯಕ, ಪ್ರತಿನಾಯಕ, ಹಾಸ್ಯ ಸ್ತ್ರೀವೇಷವನ್ನೂ ನಿರ್ವಹಿಸಿದ್ದಾರೆ. ವಿಭಿನ್ನ ನಿಲುವಿನ ಕೈಕೆ, ದಶರಥ, ದೇವವ್ರತ-ಭೀಷ್ಮ,ಕಂಸ ಕೃಷ್ಣ, ರುಕ್ಮಾಂಗದ-ಮೋಹಿನಿ, ಅಂಬೆ-ಪರಶುರಾಮ, ಮಂಥರೆ ಮುಂತಾದ ಪಾತ್ರಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಉತ್ತರ ಕುಮಾರ ಅವರಿಗೆ ಯಕ್ಷಗಾನದಲ್ಲಿ ಅಪಾರ ಮನ್ನಣೆ ತಂದುಕೊಟ್ಟ ಪಾತ್ರವಾಗಿದೆ.