ಕುಂದಾಪುರ ಸೆ 24: ಎಂಟು ತಿಂಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ ಗರ್ಭವತಿಯಾದ ಯುವತಿ ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಪ್ರಕರಣ ಬೆಳಕಿಗೆ ಬಂದ ಘಟನೆ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಕರ್ಕುಂಜೆ ನಿವಾಸಿ ಭಾಸ್ಕರ್ ಆಚಾರ್ಯ ಎಂಬಾತ ಎಂಟು ತಿಂಗಳ ಹಿಂದೆ ಕರ್ಕುಂಜೆ ಮೂಲದ ಪರಿಶಿಷ್ಟ ಜಾತಿಯ ಯುವತಿಯನ್ನ ಅತ್ಯಾಚಾರ ಯಾರಿಗೂ ಹೇಳದಂತೆ ಕೊಲೆ ಬೆದರಿಕೆ ಹಾಕಿದ್ದ. ಇದರಿಂದ ಭಯಭೀತಳಾದ ಯುವತಿ ಗರ್ಭಿಣಿಯಾದ ವಿಚಾರವನ್ನು ಮುಚ್ಚಿಟ್ಟಿದ್ದಳು. ಆದರೆ ಶನಿವಾರ ರಾತ್ರಿ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಕುಂದಾಪುರದ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಯುವತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.ಈ ಕುರಿತು ಕೋಟ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆ ಭಾಸ್ಕರ್ ಆಚಾರ್ಯನನ್ನು ಕೋಟ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ:
ಉಡುಪಿ ತಾಲೂಕು ಕರ್ಕುಂಜೆ ನಿವಾಸಿ ಭಾಸ್ಕರ್ ಆಚಾರಿ ಎಂಬಾತ ಅತ್ಯಾಚಾರಕ್ಕೊಳಗಾದ ಯುವತಿಯ ಹೊಸ ಮನೆಯ ಮಾಡಿನ ಕೆಲಸಕ್ಕೆಂದು ಬಂದ ಸಂದರ್ಭ ಇವರೊಂದಿಗೆ ಸಲುಗೆ ಏರ್ಪಟ್ಟಿತ್ತು. ೨೦೧೬ರ ಡಿಸೆಂಬರ್ ತಿಂಗಳಿನ ಹೊಸ ಮನೆಗೆ ಬಂದ ಭಾಸ್ಕರ್ ಆಚಾರ್ಯ, ಮನೆಯಲ್ಲಿ ಯಾರು ಇಲ್ಲದಿರುವುದನ್ನ ಕಂಡು ಮನೆಯ ಕೋಣೆಯೊಳಗೆ ಬಲತ್ಕಾರವಾಗಿ ಕರೆದೊಯ್ದು ಅತ್ಯಾಚಾರ ನಡೆಸಿ ಯಾರಿಗೂ ಹೇಳದಂತೆ ಕೊಲೆ ಬೆದರಿಕೆಯನ್ನೊಡ್ಡಿದ್ದ. ಇದರಿಂದ ಬೆದರಿದ ಯುವತಿ ಈ ಕೃತ್ಯವನ್ನ ಮನೆಯಲ್ಲಿ ಯಾರಿಗೂ ತಿಳಿಸಿರಲಿಲ್ಲ. ಹೆರಿಗೆಯ ಬಳಿಕ ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.