ಬೈಂದೂರು, ನ.08 (DaijiworldNews/PY): ಇಲ್ಲಿನ ಸಮೀಪದ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಕಿರು ಮೀನುಗಾರಿಕಾ ಬಂದರಿನಲ್ಲಿ ಮೀನು ಹರಾಜು ಸಂಬಂಧ ಉಪ್ಪುಂದ ಹಾಗೂ ಕೊಡೇರಿ ಮೀನುಗಾರರ ನಡುವೆ ಕೆಲಕಾಲದಿಂದ ಹೊಗೆಯಾಡುತ್ತಿದ್ದ ಅಸಮಾಧಾನ ಶನಿವಾರ ಸ್ಫೋಟಗೊಂಡು ಭಾರೀ ಘರ್ಷಣೆ ನಡೆದಿದ್ದು, ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು.






ಮೀನುಗಾರಿಕೆ ಇಲಾಖೆಯು ಕೊಡೇರಿ ಬಂದರಿನ ಮೀನು ಹರಾಜು ಪ್ರಾಂಗಣದಲ್ಲಿ ಮೀನು ಹರಾಜು ಮಾಡಲು ಉಪ್ಪುಂದ, ಕೊಡೇರಿ ಹಾಗೂ ಮರವಂತೆ ಭಾಗದ ಮೀನುಗಾರರಿಗೆ ಇತ್ತೀಚೆಗಷ್ಟೆ ತಾತ್ಕಾಲಿಕ ಅನುಮತಿ ನೀಡಿತ್ತು.
ಉಪ್ಪುಂದ ಭಾಗದ ನೂರಕ್ಕೂ ಹೆಚ್ಚು ದೋಣಿಗಳು ಶನಿವಾರ ಮಧ್ಯಾಹ್ನ ಮೀನುಗಾರಿಕೆ ನಡೆಸಿ, ಎಡಮಾವಿನ ಹೊಳೆಯ ಮೂಲಕ ಮೀನು ಮಾರಾಟ ಮಾಡಲು ಬಂದರಿನ ಪ್ರಾಂಗಣ ಪ್ರವೇಶಿಸುವಾಗ, ಕೊಡೇರಿಯ ಮೀನುಗಾರರು ಅಲ್ಲಿ ತಮಗೆ ಮೂಲಸೌಕರ್ಯ ಕಲ್ಪಿಸುವ ಮತ್ತು ಪ್ರಾಂಗಣ ಇರುವ ದಂಡೆಗೆ ಹೋಗಲು ನದಿಗೆ ಸೇತುವೆ ನಿರ್ಮಾಣ ಮಾಡುವವರೆಗೆ ಅಲ್ಲಿ ಮೀನು ಹರಾಜಿಗೆ ಅವಕಾಶ ನೀಡುವುದಿಲ್ಲ ಎಂದು ನದಿಯಲ್ಲಿ ಉಪ್ಪುಂದದ ದೋಣಿಗಳು ಸಂಚರಿಸದಂತೆ ತಮ್ಮ ದೋಣಿಯನ್ನು ಅಡ್ಡ ಇರಿಸಿ ತಡೆಯೊಡ್ಡಿದರು.
ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ ಅಗಮಿಸಿ, ಎರಡು ಭಾಗದ ಮೀನುಗಾರರ ನಡುವೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರೂ ತಮ್ಮ ಬೇಡಿಕೆ ಈಡೇರುವ ತನಕ ಹರಾಜು ಪ್ರಾಂಗಣ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಕೊಡೇರಿ ಮೀನುಗಾರರು ಪಟ್ಟುಹಿಡಿದರು.
ಮಾತುಕತೆ ವಿಫಲ, ಲಾಠಿಚಾರ್ಜ್: ಸುಮಾರು ನಾಲ್ಕು ತಾಸು ಉಪ್ಪುಂದದ ಮೀನುಗಾರರು ತಮ್ಮ ದೋಣಿಯಲ್ಲಿದ್ದ ಮೀನು ಖಾಲಿ ಮಾಡದೆ ತಮ್ಮ ದೋಣಿಗಳನ್ನು ನದಿಯಲ್ಲೇ ನಿಲ್ಲಿಸಿದ್ದರು. ಬಳಿಕ ತಹಶೀಲ್ದಾರ ಬಿ.ಪಿ. ಪೂಜಾರ್ ಭೇಟಿ ನೀಡಿ ಎರಡು ಭಾಗದ ಮೀನುಗಾರರೊಂದಿಗೆ ಮಾತುಕತೆ ನಡೆಸಿದರು. ಆದರೆ ಅದು ಫಲ ನೀಡಲಿಲ್ಲ. ಮೀನು ಹರಾಜಿಗೆ ತಡೆಯೊಡ್ಡಿದ ಕಾರಣ ಉಪ್ಪುಂದ ಕಡೆಯವರು ತಮ್ಮ ದೋಣಿಗಳನ್ನು ಕೊಡೇರಿ ಕಡೆಯ ದೋಣಿಗಳತ್ತ ನುಗ್ಗಿಸಿದರು. ಆಗ ಇಕ್ಕಡೆಯವರ ನಡುವೆ ಘರ್ಷಣೆ ನಡೆದು ನದಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಪೋಲೀಸರು ದೋಣಿ ಮೇಲೇರಿ ಲಾಠಿಬೀಸಿ ತಹಬಂದಿಗೆ ತರುವ ಪ್ರಯತ್ನ ನಡೆಸಿದರು.
ಕೊಡೇರಿ ಜನರ ವಾದ: ಬಂದರು ನಿರ್ಮಾಣ ಸಂದರ್ಭ ನೀಡಿದ ಸೇತುವೆ ಭರವಸೆ ಈಡೇರಿಲ್ಲ. ಸೇತುವೆ ನಿರ್ಮಿಸಬೇಕು. ಬಂದರು ಪ್ರದೇಶದಲ್ಲಿ ಎಲ್ಲ ಮೂಲ ಸೌಲಭ್ಯ ಕಲ್ಪಿಸಬೇಕು. ಅಲ್ಲಿಯ ತನಕ ಪ್ರಾಂಗಣದಲ್ಲಿ ಹರಾಜಿಗೆ ಅವಕಾಶನೀಡಬಾರದು ಎನ್ನುವುದು ಕೊಡೇರಿ ಜನರ ಪರವಾಗಿ ಅಲ್ಲಿನ ಟ್ರಾಲ್ ಬೋಟ್ ಸಂಘದ ಅಧ್ಯಕ್ಷ ಶುಕ್ರದಾಸ್ ಖಾರ್ವಿ ವಾದಿಸುತ್ತಿದ್ದಾರೆ.
ತಮಗೆ ಹರಾಜಿಗೆ ಅನುಮತಿ ನೀಡಿದ್ದಾರೆ: ಬಂದರಿನಲ್ಲಿ ಮೀನು ಹರಾಜಿಗೆ ಸಂಬಂಧಿಸಿ ಕೊಡೇರಿ ಭಾಗದ ಮೀನುಗಾರರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೇವೆ. ಅವರು ವಿಧಿಸಿದ್ದ ಶರ್ತದಂತೆ ಮೀನುಗಾರಿಕೆ ಇಲಾಖೆಯಿಚಿದ ಷರತ್ತುಬದ್ಧ ತಾತ್ಕಾಲಿಕ ಲಿಖಿತ ಅನುಮತಿ ಪಡೆದಿದ್ದೇವೆ. ಆದರೂ ಕೊಡೇರಿ ಭಾಗದವರು ಕೆಲವು ಬೇಡಿಕೆ ಮುಂದಿಟ್ಟು ಮೀನು ಹರಾಜಿಗೆ ತಡೆಯೊಡ್ಡುತ್ತಿದ್ದಾರೆ. ಬಂದರು ಕೊಡೇರಿಗೆ ಮಾತ್ರ ಸೀಮಿತವಲ್ಲ ಬದಲಾಗಿ ಎಲ್ಲ ಮೀನುಗಾರರಿಗೂ ಮುಕ್ತವಾಗಿದೆ. ಮೂಲ ಸೌಕರ್ಯ, ಸೇತುವೆ ಬಗ್ಗೆ ನಾವೂ ಅವರೊಡನೆ ಸೇರಿ ಹೋರಾಡಲು ಸಿದ್ಧ ಎನ್ನುವುದು ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ ಅವರ ನಿಲುವು.
"ಎರಡು ತಂಡಗಳ ಮೀನುಗಾರರ ಭಿನ್ನಾಭಿಪ್ರಾಯವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಆದರೆ ಯಾರೇ ಆದರೂ ಕಾನೂನು ಕೈಗೆತ್ತಿಕೊಂಡರೆ ಅದನ್ನು ನಿಭಾಯಿಸಲು ಪೋಲೀಸ್ ಇಲಾಖೆ ಸನ್ನದ್ಧವಾಗಿದೆ" - ಕುಮಾರಚಂದ್ರ ಹೆಚ್ಚುವರಿ ಎಎಸ್ಪಿ
ಬಂದರು ಪ್ರದೇಶದಲ್ಲಿ ಮತ್ತೆ ಘರ್ಷಣೆ ನಡೆದಿದ್ದು, ಕೆಲವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಉಭಯ ತಂಡಗಳ ದಾಂಧಲೆ ನಿಯಂತ್ರಿಸಲು ಮುಂದಾದ ಪೊಲೀಸರ ಮೇಲೆ ಕಲ್ಲು ತೂರಲಾಗಿದೆ. ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ.