Special Story - ಹರ್ಷಿಣಿ
ಉಡುಪಿ, ನ.08 (DaijiworldNews): ಉಡುಪಿ ನಗರದ ಹಲವಾರು ರಸ್ತೆಗಳು ಹೊಂಡಗುಂಡಿಯಿಂದ ಕೂಡಿದ್ದು ವಾಹನ ಸಂಚಾರಿಗಳಿಗೆ ಆಪಾಯಕ್ಕೆ ಎಡೆ ಮಾಡಿಕೊಡುತ್ತಿದೆ. ಅಂತಹ ಅಪಾಯಕಾರಿ ರಸ್ತೆ ಎಂದರೆ ಇಂದ್ರಾಳಿ ರೈಲ್ವೆ ಸೇತುವೆ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆ. ಕೊನೆ ಪಕ್ಷಜನರ ಜೀವನಕ್ಕೆ ಅಪಾಯ ಆಗದಂತೆ ತೇಪೆ ಹಾಕುವ ಕೆಲಸ ಮಾಡುತ್ತಿಲ್ಲ. ಇದೇ ರಾಷ್ಟ್ರೀಯ ಹೆದ್ದಾರಿ 169(ಎ) ಜನಪ್ರತಿನಿಧಿಗಳು ಪ್ರತಿನಿತ್ಯ ಸಂಚಾರ ಮಾಡಿದ್ದರೂ ಸಮಸ್ಯೆಗೆ ಮಾತ್ರ ಶೀಘ್ರ ಸ್ಫಂದನೆ ಸಿಕ್ಕುತ್ತಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶ.












ನಗರವನ್ನು ಇನ್ನಷ್ಟು ಅಭಿವೃದ್ದಿ ಪಡಿಸಬೇಕೆನ್ನುವ ಹಿನ್ನೆಲೆಯಿಂದ ಕಲ್ಸಂಕದಿಂದ-ಕುಂಜಿಬೆಟ್ಟುವರೆಗೆ ಚತುಷ್ಪಥ ಕಾಮಗಾರಿ ನಡೆದಿದ್ದರೂ ಮಧ್ಯ ಇರುವ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಅಗಲೀಕರಣ ಪ್ರಕ್ರಿಯೆ ಆಗದೆ ಇನ್ನೂ ಹಾಗೆ ಇದೆ. ಇದರಿಂದ ಸಾರ್ವಜನಿಕರು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ. ಅಲ್ಲಲ್ಲಿ ಎದ್ದಿರುವ ಜಲ್ಲಿ, ಕಿತ್ತುಕೊಂಡು ಹೋಗಿರುವ ಡಾಂಬರು, ಎದ್ದಿರುವ ಕಬ್ಬಿಣದ ರಾಡ್ ಗಳು ಇದರಿಂದ ವಾಹನವನ್ನು ತಪ್ಪಿಸಿಕೊಂಡು ಹೋಗುವುದೇ ನಿತ್ಯದ ಸವಾಲು.
ಇದರಿಂದಾಗಿ ನಿತ್ಯ ರಸ್ತೆಯಲ್ಲಿ ಅನೇಕ ಸಣ್ಣಪುಟ ಅಪಘಾತಗಳು ಸಂಭವಿಸಿದರೂ ರಾಷ್ಟ್ರೀಯ ಹೆದ್ದಾರಿ ಮಾತ್ರ ಇನ್ನು ಏನೂ ಕ್ರಮತೆಗೆದುಕೊಂಡಿಲ್ಲ ಅನ್ನುವುದೇ ಬೇಸರದ ಸಂಗತಿ.
ತೀರ್ಥಹಳ್ಳಿ- ಕಲ್ಸಂಕ ರಾ.ಹೆ. 169(ಎ) ಚತುಷ್ಪಥ ಕಾಮಗಾರಿ ಪ್ರಾರಂಭಗೊಂಡು ಎರಡು ವರ್ಷಗಳು ಕಳೆದಿದೆ. ಕಲ್ಸಂಕ -ಮಣಿಪಾಲ ರಸ್ತೆಯನ್ನು ಚತುಷ್ಪಥ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆಯುತ್ತಿದೆ.
ಕಳೆದೆರಡು ದಶಕಗಳಿಂದ ಇಂದ್ರಾಳಿ ರೈಲ್ವೇ ಸೇತುವೆ ಯೋಜನೆ ನನೆಗುದಿಗೆ ಬಿದ್ದಿದೆ. ಮಣಿಪಾಲ- ಕಲ್ಸಂಕ ರಾಜ್ಯ ಹೆದ್ದಾರಿ ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಇನ್ನೊಂದು ಸೇತುವೆ ನಿರ್ಮಿಸಲು ರೈಲ್ವೇ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ನಡುವೆ ಪತ್ರ ವ್ಯವಹಾರ ನಡೆದಿತ್ತು. ಆದರೆ ಸೇತುವೆ ನಿರ್ಮಾಣ ಕುರಿತು ಯಾವುದೇ ರೀತಿಯಾದ ಕೆಲಸವಾಗಿಲ್ಲ.
ಸಿ.ಆರ್. ವರದಿಯ ಪ್ರಕಾರ ರಾಷ್ಟ್ರೀಯ ಹೆದ್ದಾರಿ 169(ಎ) ಇಂದ್ರಾಳಿ ರೈಲ್ವೇ ಬ್ರಿಡ್ಜ್ ವಿನ್ಯಾಸವನ್ನು ಐಐಟಿ ಮದ್ರಾಸ್ ಪರಿಶೀಲನೆ ನಡೆಸಿ, ಕೆಲ ತಿಂಗಳ ಹಿಂದೆ ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಎನ್ಒಸಿಯನ್ನು ನೀಡಲು ಕಮೀಷನರ್ ಆಫ್ ರೈಲ್ವೇಗೆ (ಸಿಆರ್) ಕಳುಹಿಸಲಾಗಿದೆ. ಈ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವಷ್ಟೇ ಇಲಾಖೆ ಸೇತುವೆಯನ್ನು ನಿರ್ಮಿಸಲು ಅನುಮತಿ ಸಿಗಲಿದೆ. 2017ರಲ್ಲಿ ಇಂದ್ರಾಳಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಅನುಮತಿ ಕೋರಿ ಕೊಂಕಣ ರೈಲ್ವೇಗೆ ಮನವಿ ಸಲ್ಲಿಸಲಾಗಿದೆ . ಐದು ಬಾರಿ ನೀಲಿನಕಾಶೆ ಬದಲಾವಣೆ ಮಾಡಲಾಗಿದೆ.
ಆದರೆ ಅನುಮತಿ ಯಾವಾಗ ಸಿಗುತ್ತದೆ ಎನ್ನುವ ಮಾಹಿತಿ ಯಾರ ಬಳಿಯೂ ಇಲ್ಲ ಎಂಬ ವಿಚಾರ ಸರಕ್ಕಾಗಲಿ ಅಥವಾ ಸಂಬಂಧ ಪಟ್ಟ ಇಲಾಖೆಗೆ ಇರುವ ಇಚ್ಚಾ ಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಸವಾರರ ಪ್ರಾಣಕ್ಕೆ ಕಂಟಕವಾದ ಹಳೆ ಸೇತುವೆ ಹೊಸತಾಗಿ ನಿರ್ಮಾಣವಾಗುವವರೆಗೂ ಹಳೆಯ ರಸ್ತೆಯನ್ನು ಸುಸ್ಥಿತಿಯಲ್ಲಿ ಇರಿಸುವಂತೆ ಅಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೊಂಕಣ ರೈಲ್ವೇಯಿಂದ ಈಗಾಗಲೇ ಸೇತುವೆ ನೀಲನಕಾಶೆ ಪರಿಶೀಲಿಸಲಾಗಿದೆ. ಅದರ ಅನುಮೋದನೆಗೆ ಕಮಿಷನರ್ ಆಫ್ ರೈಲ್ವೇಗೆ ಕಳುಹಿಸಲಾಗಿದೆ. ಅನುಮೋದನೆ ದೊರೆತ ತತ್ಕ್ಷಣ ಕಾಮಗಾರಿ ಪ್ರಾರಂಭಿಸಬಹುದು ಎಂದು ಕಾರವಾರ ಕೊಂಕಣ ರೈಲ್ವೇಯ ಬಿ ಬಿ ನಿಖಮ್ ತಿಳಿಸಿದ್ದಾರೆ.
ಉಡುಪಿ ಶಾಸಕ ಕೆ ರಘುಪತಿ ಭಟ್ ಹೇಳಿದಂತೆ ಇಂದ್ರಾಳಿಯಲ್ಲಿ ಈಗ ಇರುವ ರೈಲ್ವೆ ಸೇತುವೆಯೊಂದಿಗೆ ಮಣಿಪಾಲ ಕಡೆಗೆ ಹೋಗುವುದಕ್ಕಾಗಿಯೇ ಇನ್ನೊಂದು ಹೊಸ ಸೇತುವೆ ನಿರ್ಮಾಣವಾಗಲಿದೆ. ಕಲ್ಸಂಕ ಜಂಕ್ಷನ್ನಲ್ಲಿ ಸಂಚಾರ ಸುವ್ಯವಸ್ಥೆಗಾಗಿ ಟ್ರಾಫಿಕ್ ಸಿಗ್ನಲ್ ಮತ್ತಿತರ ಕೆಲಸಗಳಿಗೆ ಪ್ರತ್ಯೇಕ ಅನುದಾನ ನಿಗದಿಪಡಿಸಲಾಗಿದೆ. ರಸ್ತೆಗಳು ಚರಂಡಿ, ಪುಟ್ ಪಾತ್ಗಳನ್ನು ಕೂಡ ಒಳಗೊಂಡಿರುತ್ತವೆ. ಒಟ್ಟಾರೆಯಾಗಿ ಪ್ರತ್ಯೇಕ ವಾಗಿ ನಿರ್ಮಾಣವಾಗುವ ಸೇತುವೆಯ ಒಪ್ಪಿಗೆ ಪ್ರಕ್ರಿಯೆ ಕೊನೆಯ ಹಂತದಲ್ಲಿ ಇದೆ ಎಂದು ಭರವಸೆ ನೀಡಿದ್ದಾರೆ.
ಅದೇನೆ ಇದ್ದರೂ ಪ್ರತಿ ನಿತ್ಯ ಈ ರಸ್ತೆ ಯಲ್ಲಿ ಓಡಾಡುವವರು ಈ ಸೇತುವೆಯ ದುಸ್ಥಿತಿಯನ್ನು ನೆನಪಿಟ್ಟುಕೊಂಡು ಓಡಾಡಬಹುದು. ಆದರೆ ಆ್ಯಂಬುಲೆನ್ಸ್ ಚಾಲಕರು, ಈ ಮಾರ್ಗವಾಗಿ ಹೊಸದಾಗಿ ಓಡಾಡುವವರು ಮಾತ್ರ ಅಪಾಯಕ್ಕೆ ಸಿಲುಕುವುದಂತೂ ಗ್ಯಾರಂಟಿ. ಹೊಸ ಸೇತುವೆಯ ನಿರ್ಮಾಣದ ಅನುಮೋದನೆ ಕಾಯುವ ಬದಲು ಆ ರಸ್ತೆಯ ಹೊಂಡ ಮುಚ್ಚಿ, ತೆರೆದಿರುವ ಕಬ್ಬಿಣದ ರಾಡ್ಗಳನ್ನು ಸರಿಪಡಿಸಿ ಸುಗಮ ಸಂಚಾರ ಕ್ಕೆ ಅನುವು ಮಾಡಿಕೊಡಬೇಕು ಎನ್ನುವುದು ಎಲ್ಲರ ಒಕ್ಕೊರಲ ಆಗ್ರಹ.