ಕಾಸರಗೋಡು, ನ. 08 (DaijiworldNews/HR): ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿರುವ ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಮರುದ್ದೀನ್ ಅವರನ್ನು ಕಾಞ೦ಗಾಡ್ ಮೆಜಿಸ್ಟ್ರೇಟ್ ಮುಂಭಾಗದಲ್ಲಿ ಹಾಜರುಪಡಿಸಲಾಯಿತು.

ಈ ನಡುವೆ ಜಾಮೀನು ಕೋರಿ ಕಮರುದ್ದೀನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಫ್ಯಾಷನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರ ಸಂಜೆ ಕಮರುದ್ದೀನ್ನನ್ನು ಕ್ರೈಂ ಬ್ರಾಂಚ್ ಬಂಧಿಸಿತ್ತು. ಬೆಳಿಗ್ಗೆ ವಿಚಾರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕರೆಸಿದ್ದ ಕ್ರೈಂ ಬ್ರಾಂಚ್ ಪೊಲೀಸರು ವಿಚಾರಣೆ ಬಳಿಕ ಬಂಧಿಸಿ ಮೆಜಿಸ್ಟ್ರೇಟ್ ಮುಂಭಾಗ ಹಾಜರು ಪಡಿಸಿದ್ದರು.
500 ರಷ್ಟು ಠೇವಣಿ ದಾರರಿಂದ ಸುಮಾರು 150 ಕೋಟಿ ರೂ.ಗಳಷ್ಟು ವಂಚನೆ ನಡೆದಿದ್ದು, 115 ದೂರುಗಳು ಈಗಾಗಲೇ ಲಭಿಸಿದೆ.
ಈ ನಡುವೆ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ ಪೂಕೋಯ ತಂಘಳ್ ತಲೆ ಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಹಾಜರಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದೇರ ಕೇಂದ್ರವಾಗಿ 2006ರಲ್ಲಿ ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಆರಂಭಗೊಂಡಿತು. ರಾಜಕೀಯ, ಸಾಮಾಜಿಕ ವಲಯದ ಪ್ರಮುಖರನ್ನು ಒಳಗೊಂಡ ಕಂಪೆನಿ ರಚಿಸಲಾಗಿತ್ತು.
ಈ ಕಂಪೆನಿಯಲ್ಲಿ 800 ರಷ್ಟು ಮಂದಿ 150 ಕೋಟಿ ರೂ.ಗಳಷ್ಟು ಠೇವಣಿ ಹೂಡಿದ್ದು, ಹಲವಾರು ಮಂದಿ ನಗದು ಹಾಗೂ ಇನ್ನೂ ಹಲವಾರು ಮಂದಿ ಚಿನ್ನಾಭರಣವಾಗಿ ಠೇವಣಿ ಹೂಡಿದ್ದರು. ಆರಂಭದ ದಿನಗಳಲ್ಲಿ ಠೇವಣಿ ದಾರರಿಗೆ ಲಾಭದ ಮೊತ್ತವು ನೀಡಲಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ ಲಾಭದ ಮೊತ್ತ ಸ್ಥಗಿತಗೊಂಡಿತ್ತು. ಕೆಲವೇ ತಿಂಗಳಲ್ಲಿ ಜುವೆಲ್ಲರಿಯ ಒಂದೊಂದು ಶಾಖೆಗಳಿಗೆ ಬೀಗ ಜಡಿಯಲಾರಂಭಿಸಿದ್ದು, ಇದರಿಂದ ಹೂಡಿಕೆದಾರರು ಪೊಲೀಸ್ ಠಾಣೆ ಮೆಟ್ಟಲೇರುವಂತಾಯಿತು.
ಕಾಸರಗೋಡು, ಚಂದೇರ, ಪಯ್ಯನ್ನೂರು ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ.