ಸುಳ್ಯ, ಜೂ 01 : ಮುಂದಿನ 5-6 ತಿಂಗಳಿನ ಒಳಗೆ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಅಂಗಾರ ಜಯ ಸಾಧಿಸಿದ ಹಿನ್ನೆಲೆ ಅಭಿನಂದನಾ ಸಭೆ ನಡೆದಿತ್ತು. ಈ ವೇಳೆ ಮಾತನಾಡಿದ ಸಂಸದ ನಳಿನ್, ರಾಜ್ಯದಲ್ಲಿರುವ ಈ ಸರಕಾರ 3 ತಿಂಗಳಿಗಿಂತ ಹೆಚ್ಚು ಬಾಳುವುದಿಲ್ಲ. ಸಿದ್ದರಾಮಯ್ಯ ಸರಕಾರದ ಹಿಂದೂ ವಿರೋಧಿ ನೀತಿ ಮತ್ತು ಹಿಂದೂ ಕಾರ್ಯಕರ್ತರ ಹತ್ಯೆಯ ವಿರುದ್ದ ಇಡೀ ಹಿಂದೂ ಸಮಾಜ ಒಟ್ಟಾಗಿತ್ತು. ಜನರ ವಿಶ್ವಾಸಮತದಿಂದ ಜಿಲ್ಲೆಯ ಬಿಜೆಪಿ ಗೆಲುವಿನಲ್ಲಿ ಇತಿಹಾಸ ನಿರ್ಮಾಣ ಆಗಿದೆ ಎಂದು ತಿಳಿಸಿದರು.
ಮಂಗಳೂರಿನಲ್ಲಿ ಭಾರೀ ಮಳೆಯಿಂದ ಅಪಾರ ಹಾನಿಯಾದಾಗ ದೇಶದ ಪ್ರಧಾನಮಂತ್ರಿಯವರೇ ನಿಮ್ಮ ಜೊತೆ ನಾವಿದ್ದೇವೆ ಎಂಬ ಹೇಳಿಕೆ ನೀಡಿದ್ದರು. ಆದರೆ ರಾಜ್ಯದ ಮುಖ್ಯಮಂತ್ರಿ ಯಾವುದೇ ಹೇಳಿಕೆ ನೀಡಿಲ್ಲ. ಅಧಿಕಾರಿಗಳ ತಂಡವನ್ನು ಜಿಲ್ಲೆಗೆ ಕಳುಹಿಸಿ ಕೊಟ್ಟಿಲ್ಲ. ಮಾತ್ರವಲ್ಲ ಯಾವುದೇ ಪ್ಯಾಕೇಜ್ ಘೋಷಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಎಸ್ ಅಂಗಾರ, ನಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನತೆ ಹೇಳಿಕೊಳ್ಳುವ ಹಾಗೆ ಕಾರ್ಯಕರ್ತರು ಕೆಲಸ ಮಾಡಬೇಕು. ಇಲ್ಲದೇ ಇದ್ದಲ್ಲಿ ವಿರೋಧಿಗಳಿಗೆ ಬಾಯಿ ಬಿಚ್ಚಲು ಅವಕಾಶವಾಗುತ್ತದೆ. ಕಾರ್ಯಕರ್ತರು ಏನೇ ಕೆಲಸವಿದ್ದರೂ ಮುಂದಾಗಬೇಕು. ಅಭಿವೃದ್ಧಿ ಕೆಲಸಗಳ ಬಗ್ಗೆ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ. ಎಲ್ಲಾ ರೀತಿಯ ಅಭಿವೃದ್ಧಿಗಳನ್ನು ಬಿಜೆಪಿ ಮಾಡಿಯೇ ತೀರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.