ಬಂಟ್ವಾಳ, ನ.09 (DaijiworldNews/PY): ಕೊರೊನಾದಲ್ಲಿ ಹಣ ಬಂದಿದೆ, ಹಣ ಸಿಗಬೇಕಾದರೆ ಶುಲ್ಕ ಕಟ್ಟಬೇಕು ಎಂದು ಹೇಳಿ ಬಡಮಹಿಳೆಯೋರ್ವರ ಬಂಗಾರ ದೋಚಿದ ಘಟನೆ ನ.9ರ ಸೋಮವಾರದಂದು ಮಿನಿವಿಧಾನ ಸೌಧದ ಆವರಣದಲ್ಲಿ ನಡೆದಿದೆ.

ಅಮ್ಟಾಡಿ ತಲೆಂಬಿಲ ನಿವಾಸಿ ಜಯಂತಿ ಎಂಬವರು ಕಿವಿಯಲ್ಲಿದ್ದ ಚಿನ್ನದ ಬೆಂಡೋಲೆಗಳನ್ನು ಕಳೆದುಕೊಂಡು ಮೋಸ ಹೋದ ಮಹಿಳೆ.
ತಲೆಂಬಿಲ ನಿವಾಸಿ ಜಯಂತಿ ಅವರು ಬಿ.ಸಿರೋಡಿನ ಮೆಸ್ಕಾಂ ಕಚೇರಿಗೆ ಬಿಲ್ ಕಟ್ಟಲು ಬಂದಿದ್ದರು. ಮೆಸ್ಕಾಂ ಬಿಲ್ ಕಟ್ಟಿ ಬಳಿಕ ವಾಪಸ್ಸು ತೆರಳುವ ವೇಳೆ ಅಪರಿಚಿತ ವ್ಯಕ್ತಿಯೋರ್ವ ಮಹಿಳೆಯಲ್ಲಿ ಪರಿಚಯ ಮಾಡಿಕೊಂಡು, ತಾನು ಶೀನಪ್ಪ ಅವರ ಮಗ ಸಂತೋಷ ಎಂದು ನಂಬಿಸಿ, ನಿಮಗೆ ಕೊರೊನಾದಲ್ಲಿ ಒಂದುವರೆ ಲಕ್ಷ ಹಣ ಬಂದಿದೆ. ಅದನ್ನು ಪಡೆಯಲು ಕನಿಷ್ಟ ಹತ್ತು ಸಾವಿರ ಹಣ ಕಟ್ಟಬೇಕು ಎಂದು ಹೇಳಿದ್ದಾನೆ.
ಬಳಿಕ ಆತ, ಮಹಿಳೆಯ ಬಳಿ ನೀವು ಆಧಾರ್ ಕಾರ್ಡ್ ತಂದಿದ್ದೀರಾ.?. ಇಲ್ಲ ಅಂದಾಗ ನೀವು ಮಿನಿವಿಧಾನ ಸೌಧದಕ್ಕೆ ಬನ್ನಿ, ಅರ್ಜಿ ನೀಡಬೇಕು ಎಂದು ಅವರನ್ನು ಕರೆದುಕೊಂಡು ಹೋಗಿದ್ದಾನೆ . ಬಳಿಕ ಹತ್ತು ಸಾವಿರ ಕೇಳಿದಾಗ ನನ್ನ ಬಳಿ ಇಲ್ಲ ಮಗನ ಬಳಿ ಕೇಳಿ ಕೊಡುತ್ತೇನೆ ಎಂದು ಮಹಿಳೆ ಹೇಳಿದಾಗ, ಮಗನಿಗೆ ನಾನು ಪೋನ್ ಮಾಡಿದೆ ಅವನಲ್ಲಿ ಇಲ್ಲ ಅಂತೆ, ನಿಮ್ಮಲ್ಲಿರುವ ಕಿವಿಯ ಬಂಗಾರವನ್ನು ಕೊಡುವಂತೆ ಹೇಳಿದ್ದಾನೆ. ಈ ವೇಳೆ ಮಹಿಳೆ ಕಿವಿಯಲ್ಲಿದ್ದ ಬೆಂಡೋಲೆಗಳನ್ನು ತೆಗೆದುಕೊಟ್ಟಿದ್ದಾರೆ. ಮರುಕ್ಷಣವೇ ಬಂಗಾರ ಪಡೆದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.
ಅಪರಿಚಿತ ವ್ಯಕ್ತಿ ಬಂಗಾರ ಕೊಂಡುಹೋದ ಮೇಲೆ ಮಹಿಳೆ ಮಿನಿವಿಧಾನ ಸೌಧದ ಕಚೇರಿಯ ಮಹಿಳಾ ಸಿಬ್ಬಂದಿಯ ಮೂಲಕ ಮಗನಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಮಗನಿಗೆ ತಾಯಿಯನ್ನು ಮೋಸಗೊಳಿಸಿ ಬಂಗಾರ ಲಪಾಟಾಯಿಸಿದ ಬಗ್ಗೆ ತಿಳಿದು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯ ಪತ್ತೆಗಾಗಿ ಮಿನಿ ವಿಧಾನ ಸೌಧದಲ್ಲಿರುವ ಸಿ.ಸಿ.ಕ್ಯಾಮರಾವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.