ಮಂಗಳೂರು, ನ.09 (DaijiworldNews/PY): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಿದ್ದಕ್ಕಾಗಿ ಜಿಲ್ಲಾ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ದ ಸೋಮವಾರ ಕೆಂಜಾರುವಿನಲ್ಲಿ ಪ್ರತಿಭಟನೆ ನಡೆಸಿತು.








ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಾಮನಾಥ್ ರೈ, "ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಯು.ಎಸ್. ಮಲ್ಯ ಅವರು ಜವಾಹರಲಾಲ್ ನೆಹರೂ ಅವರ ಬೆಂಬಲದೊಂದಿಗೆ ಮಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದ್ದವರು. ಈಗ ಕೇಂದ್ರ ಸರ್ಕಾರವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವು ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಿದೆ. ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿತ್ತು. ಆದರೆ, ಈಗ ಬಿಜೆಪಿ ಸರ್ಕಾರವು ಅದನ್ನುಮಾರಾಟ ಮಾಡುತ್ತಿದೆ" ಎಂದು ಆರೋಪಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಲವಾರು ಭರವಸೆ ನೀಡಿದೆ. ಆದರೆ, ಆ ಭರವಸೆಗಳನ್ನು ಪೂರೈಸಲು ವಿಫಲವಾಗಿದೆ. ಬಿಜೆಪಿಯನ್ನು ಭಾರತೀಯ ಜೂಟ್ ಪಕ್ಷ ಎಂದು ಕರೆಯಬಹುದು ಎಂದರು.
ಮಾಜಿ ಶಾಸಕ ಐವಾನ್ ಡಿಸೋಜ ಮಾತನಾಡಿ, "ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಿ ಅದಾನಿಗೆ ನೀಡುವ ಅವಶ್ಯಕತೆ ಏನಿತ್ತು?. ಮೋದಿ ಅಧಿಕಾರಕ್ಕೆ ಬಂದ ನಂತರ ಅಂಬಾನಿ ಮತ್ತು ಅದಾನಿಯ ಬಗ್ಗೆ ಸಾಕಷ್ಟು ಒಲವು ತೋರಿದ್ದಾರೆ. ಅವರು ಇಂದು ಶ್ರೀಮಂತರಾಗಿದ್ದಾರೆ" ಎಂದು ತಿಳಿಸಿದರು.
"ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಿದ ನಂತರ ಸಂಸತ್ತಿನಲ್ಲಿ ಮುಂದುವರಿಯಲು ಬಿಜೆಪಿಗೆ ಯಾವುದೇ ನೈತಿಕ ಹಕ್ಕಿಲ್ಲ. ಸ್ಥಳೀಯ ಬಿಜೆಪಿ ನಾಯಕರು ಯಾರೂ ಕೂಡಾ ಈ ಬಗ್ಗೆ ಮಾತನಾಡಲಿಲ್ಲ, ಹೀಗಾಗಿ ಅವರು ಅದಾನಿಯನ್ನು ಬೆಂಬಲಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ" ಎಂದು ಹೇಳಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, "ಕಾಂಗ್ರೆಸ್ ಜಿಲ್ಲೆಯ ಅಭಿವೃದ್ದಿಗಾಗಿ ಬಂದರು, ರೈಲ್ವೆ, ವಿಮಾನ ನಿಲ್ದಾಣ ಮುಂತಾದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಆದರೆ, ಬಿಜೆಪಿ ಸರ್ಕಾರ ಕಾಂಗ್ರೆಸ್ ನೀಡಿದ ಕೊಡುಗೆಯನ್ನು ಖಾಸಗೀಕರಣಗೊಳಿಸುತ್ತಿದೆ" ಎಂದು ಆರೋಪಿಸಿದರು.
"ಬಿಜೆಪಿಗೆ ಜಿಲ್ಲೆಯ ಬಗ್ಗೆ ಯಾವುದೇ ಕಾಳಜಿ ಇಲ್ಲ. ದಕ್ಷಿಣ ಕನ್ನಡದ ಪ್ರಮುಖ ನಾಯಕರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬೇಕೆಂದು ನಾವು ಒತ್ತಾಯಿಸುತ್ತೇವೆ. ಕೆಂಜಾರು ಬಳಿಯ ಬಸ್ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರಿಡಲಾಗಿದೆ. ಅಲ್ಲದೇ, ವಿಮಾನ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರಿಟ್ಟರೂ ನಮಗೆ ಯಾವುದೇ ಸಮಸ್ಯೆ ಇಲ್ಲ. ಗುಜರಾತ್ ನಾಗರಿಕರ ಬದಲು ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ನೀಡುವಂತೆ ಅದಾನಿಯ ವಿಮಾನ ನಿಲ್ದಾಣದ ಟರ್ಮಿನಲ್ ವ್ಯವಸ್ಥಾಪಕರನ್ನು ನಾವು ಒತ್ತಾಯಿಸುತ್ತೇವೆ" ಎಂದು ಹೇಳಿದರು.
ಈ ಸಂದರ್ಭ, ಮಾಜಿ ಶಾಸಕ ಜೆ ಆರ್ ಲೋಬೊ, ಅಭಯಚಂದ್ರ ಜೈನ್, ಮೊಹಿಯುದ್ದೀನ್ ಬಾವಾ ಮತ್ತು ಇತರರು ಉಪಸ್ಥಿತರಿದ್ದರು.