ಕುಂದಾಪುರ, ನ.09 (DaijiworldNews/PY): "ಸಬಲೀಕರಣ, ಸ್ವಾವಲಂಬನೆ, ಕೃಷಿ ಅಭಿವೃದ್ದಿ ಹೀಗೆ ಗ್ರಾಮೀಣಾಭಿವೃದ್ದಿಯಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳ ಅನುಷ್ಠಾನಿಸಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊರೋನಾ ಸಂದಿಗ್ದ ಸ್ಥಿತಿಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಯೋಚನೆಯಿಂದ ಜ್ಞಾನತಾಣ ಕಾರ್ಯಕ್ರಮದ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ಯೋಜನೆಯ ಸದಸ್ಯರ ಮಕ್ಕಳಿಗೆ ಆನ್ಲೈನ್ ಕಲಿಕೆಗೆ ಪೂರಕವಾಗಿ ಲ್ಯಾಪ್ಟಾಪ್, ಟ್ಯಾಬ್ಗಳನ್ನು ನೀಡುತ್ತಿರುವುದು ಸ್ತುತ್ಯರ್ಹವಾದುದು" ಎಂದು ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.






ಅವರು ಕುಂದಾಪುರ ವಿಶ್ವಬ್ರಾಹ್ಮಣ ಸಮಾಜದ ಸಭಾಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ರಿ., ಧರ್ಮಸ್ಥಳ ವತಿಯಿಂದ ಕುಂದಾಪುರ ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಅಂತರ್ಜಾಲ ಶಿಕ್ಷಣ ವ್ಯವಸ್ಥೆಯ ಜ್ಞಾನತಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
"ಕೇಂದ್ರ, ರಾಜ್ಯ ಸರ್ಕಾರಗಳು ಮಾಡದೇ ಇರುವಂತಹ ಕೆಲಸವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿದೆ. ವಿದ್ಯಾರ್ಥಿಗಳು ಈ ಸೌಲಭ್ಯದ ಸದುಪಯೋಗ ಪಡಿಸಿಕೊಂಡು ನೈಜವಾದ ಜ್ಞಾನವನ್ನು ಪಡೆದು ದೇಶಕ್ಕೆ ಸತ್ಪ್ರಜೆಗಳಾಗಿ ಮೂಡಿಬರಬೇಕು" ಎಂದರು.
"ಇಂದು ಅಂತರ್ಜಾಲದ ವಿಷಯದಲ್ಲಿ ಸಾಧಕ-ಬಾಧಕಗಳು ಇವೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ಇಲ್ಲದಿದ್ದದರೆ ಮಕ್ಕಳು ಕೈ ತಪ್ಪಿಹೋಗುವ ಸಾಧ್ಯತೆಗಳು ಇವೆ. ರಾಜ್ಯದ 30 ಜಿಲ್ಲೆಗಳಲ್ಲಿ ಗ್ರಾಮಾಭಿವೃದ್ದಿ ಯೋಜನೆ ವ್ಯಾಪಿಸಿದೆ. ಅದರಲ್ಲಿಯೂ ಕರಾವಳಿಯ ಭಾಗದ ಜನ ಹೆಚ್ಚು ಸದುಪಯೋಗ ಪಡೆದುಕೊಂಡಿದ್ದಾರೆ" ಎಂದರು.
ಕೇಂದ್ರ ಒಕ್ಕೂಟದ ಅಧ್ಯಕ್ಷೆ ಶೋಭಾ ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾ.ಪಂ.ಅಧ್ಯಕ್ಷೆ ಇಂದಿರಾ ಶೆಟ್ಟಿ 7 ಟ್ಯಾಬ್ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ಜಿ.ಪಂ.ಸದಸ್ಯೆ ಲಕ್ಷೀ ಮಂಜು ಬಿಲ್ಲವ ಲ್ಯಾಪ್ಟಾಪ್ಗಳನ್ನು ವಿತರಿಸಿದರು. ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಜ್ಞಾನತಾಣ ಕರಪತ್ರ ಬಿಡುಗಡೆಗೊಳಿಸಿದರು.
ಕುಂದಾಪುರ ನಗರಾಭಿವೃದ್ದಿ ಪ್ರಾಧೀಕಾರದ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಆರ್.ನವೀನಚಂದ್ರ ಶೆಟ್ಟಿ ರಟ್ಟಾಡಿ, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕಿ ದೇವಕುಮಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕುಂದಾಪುರ ತಾಲೂಕು ಯೋಜನಾಧಿಕಾರಿ ಮುರಳೀಧರ ಕೆ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪುರ ವಲಯ ಮೇಲ್ವಿಚಾರಕ ಪಾಂಡ್ಯನ್ ವಂದಿಸಿದರು. ಕೃಷಿ ಅಧಿಕಾರಿ ಚೇತನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.