ಉಡುಪಿ, ನ.09 (DaijiworldNews/PY): ಕಳೆದ ಹಲವು ವರ್ಷಗಳಿಂದ ಹಿರಿಯ ನಾಗರಿಕರ ಕಷ್ಟಗಳಿಗೆ ಸ್ಪಂದಿಸುವ ಸಹಾಯವಾಣಿ ಸಿಬ್ಬಂದಿಗಳು 15 ತಿಂಗಳ ವೇತನ ಇಲ್ಲದೆ ಕರ್ತವ್ಯಕ್ಕೆ ಹಾಜರಾಗದೇ ಇರುವುದರಿಂದ ಸಂಕಷ್ಟದಲ್ಲಿರುವ ಹಿರಿಯ ನಾಗರಿಕರು ಅಸಹಾಯಕರಾಗಿದ್ದು, ಸಿಬ್ಬಂದಿಗಳ ಸಮಸ್ಯೆ ಪರಿಹರಿಸಿ ಸಹಾಯವಾಣಿ ಕೇಂದ್ರ ಮೊದಲಿನಂತೆ ಸೇವೆ ನೀಡುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ವಿಶು ಶೆಟ್ಟಿ ಅಂಬಲಪಾಡಿಯವರು ಶಾಸಕ ರಘುಪತಿ ಭಟ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಹಿರಿಯ ನಾಗರಿಕರ ಸಹಾಯವಾಣಿ ಕಾರ್ಯವನ್ನು ನಡೆಸುತ್ತಿದ್ದು, ಬೀದಿಗೆ ಬಿದ್ದ ಅಸಹಾಯಕ, ಮನೆಯಿಂದ ನಿರ್ಲಕ್ಷಕ್ಕೊಳಗಾದ, ಮಾನಸಿಕವಾಗಿ ಅಸಹಾಯಕರಾದ ಇನ್ನೂ ಹಲವು ಕಾರಣಗಳಿಂದ ತೊಂದರೆಗೊಳಗಾದವರಿಗೆ ಆಶ್ರಯ ಹಾಗೂ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಹತ್ತು ಹಲವು ಪ್ರಕರಣಗಳನ್ನು ನ್ಯಾಯಾಲಯದ ಮೂಲಕ ಇತ್ಯರ್ಥಗೊಳಿಸಿ ಅಸಹಾಯಕ ವೃದ್ಧರಿಗೆ ಆಶ್ರಯವಾಗಿತ್ತು ಸಹಾಯವಾಣಿ. ಇದೀಗ ಕೆಲವು ದಿನಗಳಿಂದ ಸಹಾಯವಾಣಿ ತನ್ನ ಕೆಲಸವನ್ನು ನಿಲ್ಲಿಸಿದ್ದು, ವೃದ್ದರು ತಮ್ಮ ಬದುಕಿನ ಆಸರೆಗೆ ಸಹಾಯಕ್ಕೆ ಬಂದಾಗ ಸಹಾಯವಾಣಿಯ ಕಾರ್ಯಕರ್ತರು ಕೇಂದ್ರದಲ್ಲಿ ಇಲ್ಲವಾಗಿದ್ದಾರೆ. ಯಾವುದೇ ರೀತಿಯ ಮಾಹಿತಿಗೂ ಅಲಭ್ಯರಾಗಿದ್ದಾರೆ. ಈ ಬಗ್ಗೆ ಮಾಹಿತಿ ಒಂದರ ಪ್ರಕಾರ, ಸಿಬ್ಬಂದಿಗಳಿಗೆ ವೇತನವಾಗದೆ ಒಂದು ವರುಷ ಮೂರು ತಿಂಗಳಾಗಿದೆ. ವೇತನ ಸಿಗದಿದ್ದರೂ ಈವರೆಗೆ ಕೆಲಸ ಮಾಡಿದ್ದೇವೆ. ಇದೀಗ ನಮಗೆ ವೇತನವಾಗದೆ ಕೆಲಸ ನಡೆಸಲು ಸಾಧ್ಯವಿಲ್ಲ. ಹದಿನೈದು ತಿಂಗಳು ಹರಸಾಹಸ ಮಾಡಿ ಕಷ್ಟದಲ್ಲಿ ನಮ್ಮಿಂದಾದ ಸೇವೆಯನ್ನು ಸಾರ್ವಜನಿಕರ ಸಹಾಯದಿಂದ ಯಶಸ್ವಿಗೊಳಿಸಿದ್ದೇವೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲಿಯವರೆಗೆ ಎಂದರೆ ಕಚೇರಿಯ ಪುಸ್ತಕ ಸಾಮಾಗ್ರಿಗಳಿಗೂ ಆರ್ಥಿಕತೆಯ ಕಷ್ಟ ಒದಗಿದೆ ಎಂಬ ಮಾಹಿತಿಯಿದೆ.
ಈ ಬಗ್ಗೆ ಬಹಳಷ್ಟು ಬೇಸರ ವ್ಯಕ್ತಪಡಿಸಿದ ವಿಶು ಶೆಟ್ಟಿಯವರು, ಈಗ ಬಹಳಷ್ಟು ಜನ ಹಿರಿಯ ನಾಗರಿಕರು ಬೀದಿಪಾಲಾಗಿ ಅಸಹಾಯಕರಾಗಿದ್ದಾರೆ, ಹಾಗಾಗಿ ತುರ್ತು ಕ್ರಮ ಜರುಗಿಸಲು ಶಾಸಕರಲ್ಲಿ ವಿನಂತಿಸಿದ್ದಾರೆ. ಈ ಬಗ್ಗೆ ಮನವಿ ಸ್ವೀಕರಿಸಿದ ಶಾಸಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿ ಸ್ಪಂದಿಸಿದ್ದಾರೆ.