ಕಾರ್ಕಳ, ನ.09 (DaijiworldNews/PY): ಕಾರ್ಕಳ ನಗರದ ಮಲ್ಲಿಗೆ ಓಣಿಯಲ್ಲಿ ಅನಧಿಕೃತವಾಗಿ ಮೇಲಂತಸ್ತು ಕಟ್ಟಡದ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ ಎಂಬ ಸಾರ್ವಜನಿಕರ ಮಾಹಿತಿಯ ಮೇರೆಗೆ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ನೇತೃತ್ವದಲ್ಲಿ ತಂಡ ಕಾರ್ಯಚರಣೆ ನಡೆಸಿದ ಘಟನೆ ನ.9ರ ಸೋಮವಾರ ಬೆಳಿಗ್ಗೆ ನಡೆದಿದೆ.



ಪುರಸಭೆಯಿಂದ ಅನುಮತಿ ಪಡೆಯದೇ ಮದ್ಯವರ್ತಿಯೊಬ್ಬರ ಮುತುವರ್ಜಿಯಲ್ಲಿ ಅನಧಿಕೃತ ಮೇಲಂತಸ್ತು ಕಟ್ಟಡದ ಕಾಮಗಾರಿ ನಡೆಸಲಾಗುತ್ತಿದ್ದು, ಕಾರ್ಯಚರಣೆಯ ವೇಳೆಗೆ ಘಟನಾ ಸ್ಥಳದಿಂದ ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿದ್ದ ಪರಿಕರಗಳನ್ನು ಪುರಸಭಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅನಧಿಕೃತವಾಗಿ ಮೇಲಂತಸ್ತು ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ನಾಗರಾಜ ಕಿಣಿಯವರಿಗೆ ಪುರಸಭೆ ನೋಟಿಸ್ ಜಾರಿಗೊಳಿಸಿದ್ದು, ಕಾಮಗಾರಿಯನ್ನು ತಡೆ ಹಿಡಿಯಲಾಗಿದೆ. ಅನಧಿಕೃತ ಕಟ್ಟಡಗಳು ತಲೆ ಎತ್ತುತ್ತಿರುವುದರಿಂದ ವಾಹನ ಪಾರ್ಕಿಂಗ್, ಸೇರಿದಂತೆ ಹಲವು ಸಮಸ್ಯೆ ಎದುರಾಗಲಿದೆ.