ಮಿತ್ತೂರು, ನ.10 (DaijiworldNews/PY): ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ 10 ಆಸ್ಪತ್ರೆಗಳ ಸಹಯೋಗದಲ್ಲಿ 200ನೇ ರಕ್ತದಾನ ಶಿಬಿರವು ಮಿತ್ತೂರಿನ ಕೆ.ಜಿ.ಎನ್ ಕ್ಯಾಂಪಸ್ನಲ್ಲಿ ಭಾನುವಾರ ನಡೆಯಿತು.





ಉಡುಪಿ, ಚಿಕ್ಕಮಗಳೂರು ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 110 ಬಾರಿ ರಕ್ತದಾನ ಮಾಡಿದ ಸುಧಾಕರ್ ರೈ ಸುಳ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, "ರಕ್ತದಾನ ಶ್ರೇಷ್ಠದಾನವಾಗಿದೆ. ರಕ್ತಕ್ಕೆ ಬೇರೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ರಕ್ತ ನೀಡುವ ಮೂಲಕ ಜೀವವನ್ನು ಉಳಿಸಬಹುದು. ಮನುಷ್ಯರನ್ನು ಪ್ರೀತಿ ಮಾಡುವ ವ್ಯಕ್ತಿ ದೇವರನ್ನು ಕೂಡಾ ಪ್ರೀತಿಸುತ್ತಾನೆ. ರಕ್ತದಾನದ ಮೂಲಕ ಸೌಹಾರ್ದತೆ ನೆಲೆಯಾಗುತ್ತದೆ" ಎಂದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಮಾತನಾಡಿ, "ಬದುಕನ್ನು ಬಲಿ ಕೊಡಬಾರದು. ಬದುಕನ್ನು ಉತ್ತಮ ಕಾರ್ಯಗಳಿಗೆ ಸದ್ವಿನಿಯೋಗಪಡಿಸಬೇಕು. ರಕ್ತದಾನ ಶಿಬಿರಗಳು ಸಮಾಜದ ಅಭ್ಯುದಯಕ್ಕೆ ಕಾರಣವಾಗಿದೆ. ಪ್ರತಿಯೊಬ್ಬರಿಂದ ಸಮಾಜ ಕಟ್ಟುವ ಕಾರ್ಯವಾಗಬೇಕು. ತ್ಯಾಗಪೂರ್ಣ ಸೇವೆ ಶಿಬಿರಗಳ ಮೂಲಕ ನಡೆಯಬೇಕು" ಎಂದರು.
ಇದೇ ವೇಳೆ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಇಸ್ಮಾಯೀಲ್ ಮಾಸ್ಟರ್ ಮಂಗಲಪದವು, 40 ತಿಂಗಳಲ್ಲಿ 200 ರಕ್ತದಾನ ಶಿಬಿರವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕರೀಂ ಕದ್ಕಾರ್ ಅವರನ್ನು ಸನ್ಮಾನಿಸಲಾಯಿತು. ಯುವ ಬರಹಗಾರರ ಸಿ.ಐ. ಇಸ್ಹಾಕ್ ಪಜೀರ್ ಅವರ 'ಅಲ್ ಮಸಾಜಿದ್' ಬಿಡುಗಡೆಗೊಳಿಸಲಾಯಿತು. ಬ್ಲಡ್ ಸೈಬೋ ನಡೆಸಿದ 199 ಕ್ಯಾಂಪ್ ಗಳ ಪೋಟೋ ಪ್ರದರ್ಶನ ಪೋಸ್ಟರ್ ಹಾಕಿದ್ದು, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಪುತ್ತೂರು ದಹವಾ ವಿಂಗ್ ನಡೆಸಿದ ಟೀ ಸ್ಟಾಲ್ ಹಾಗೂ ಫ್ರೂಟ್ ಸೆಂಟರ್ ಎಲ್ಲರ ಗಮನ ಸೆಳೆಯಿತು.
ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಅದ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ ಮುನ್ನುಡಿ ಮಾತನಾಡಿದರು. ಶಾಸಕ ಯು ಟಿ ಖಾದರ್, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ಜಿಂ.ಎಂ.ಕಾಮಿಲ್ ಸಖಾಫಿ, ಹಾಫಿಳ್ ಸುಫ್ಯಾನ್ ಸಖಾಫಿ, ಸಿರಾಜುದ್ದೀನ್ ಸಖಾಫಿ ಕನ್ಯಾನ, ವಿಟ್ಲ ಠಾಣಾಧಿಕಾರಿ ವಿನೋದ್ ಕುಮಾರ್ ರೆಡ್ಡಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ಮೊದಲಾದವರು ಮಾತನಾಡಿದರು.
ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ, ಸಯ್ಯಿದ್ ಖುಬೈಬ್ ತಂಙಲ್ ಉಳ್ಳಾಲ, ಶರೀಫ್ ಸಖಾಫಿ ಮಾಣಿ, ಮಹಮ್ಮದ್ ಅಲಿ ಸಖಾಫಿ ಸುರಿಬೈಲು, ಸಲೀಂ ಹಾಜಿ ಬೈರಿಕಟ್ಟೆ,ಕೊಂಬಾಳಿ ಝುಹ್ರಿ, ನವಾಝ್ ಸಖಾಫಿ ಅಡ್ಯಾರ್ಪದವು,ಫೈಝಲ್ ಝುಹರಿ ಕಲ್ಲುಗುಂಡಿ, ಜಬ್ಬಾರ್ ಬೋಳಿಯಾರ್, ಹಾಶಿರ್ ಪೆರಿಮಾರ್, ಕೆಸಿಎಪ್ ನ ಖಲಂದರ್ ಕಬಕ, ಅಶ್ರಪ್ ಕಟ್ಟದಪಡ್ಪು, ಖಲಂದರ್ ಬಾಳೆಹೊನ್ನೂರು, ಮೊಹಮ್ಮದ್ ಕುಂಬ್ರ, ನಾಸೀರ್ ಬೇಂಗಿಲ, ಮೊದಲಾದವರು ಭಾಗವಹಿಸಿದ್ದರು.
ರಶೀದ್ ಹಾಜಿ ವಗ್ಗ ಸ್ವಾಗತಿಸಿ, ಶರೀಫ್ ನಂದಾವರ ವಂದಿಸಿದರು. ತೌಸೀಫ್ ಸಅದಿ ಹರೇಕಳ ಪ್ರಸ್ತಾವನೆಗೈದರು. ಮಹಮ್ಮದ್ ಶರೀಫ್ ಬೆರ್ಕಳ ಕಾರ್ಯಕ್ರಮ ನಿರೂಪಿಸಿದರು.