ಕಾಸರಗೋಡು, ನ.10 (DaijiworldNews/PY): ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಕಳುಹಿಸಿ ಕೊಟ್ಟಿರುವುದಾಗಿ ಕೃಷ್ಣ ಭಟ್ ತಿಳಿಸಿದ್ದಾರೆ.

ಸಾಯಿರಾಂ ಗೋಪಾಲ ಕೃಷ್ಣ ಭಟ್ ಅವರ ಪುತ್ರರಾಗಿರುವ ಕೃಷ್ಣ ಭಟ್ ಕಳೆದ ಮೂರು ಬಾರಿ ಗ್ರಾಮ ಪಂಚಾಯತ್ಗೆ ಆಯ್ಕೆಯಾಗಿದ್ದರು. 2010ರಲ್ಲಿ ಉಪಾಧ್ಯಕ್ಷರಾಗಿದ್ದ ಅವರು, 2015ರಿಂದ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ತೀರ್ಮಾನಿಸಿರುವುದಾಗಿ ಅವರು ತಿಳಿಸಿದ್ದಾರೆ. ಪಕ್ಷದ ಕೆಲ ನಾಯಕರ ಹಾಗೂ ಯು.ಡಿ.ಎಫ್.ನ ಘಟಕ ಪಕ್ಷವಾದ ಮುಸ್ಲಿಂ ಲೀಗ್ನ ಧೋರಣೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷ ತ್ಯಜಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
2005, 2010 ಮತ್ತು 2015ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕೃಷ್ಣ ಭಟ್ ಪಕ್ಷ ತ್ಯಜಿಸಿರುವುದು ಕಾಂಗ್ರೆಸ್ಗೆ ಹಿನ್ನಡೆಯಾದಂತಾಗಿದೆ.