ಬಂಟ್ವಾಳ, ನ. 11 (DaijiworldNews/MB) : ಬರುವ ವಾರದಲ್ಲೇ ದೀಪಗಳ ಹಬ್ಬವಾದ ದೀಪಾವಳಿ ಆಗಮಿಸಲಿದೆ. ಕೊರೊನಾ ಸೋಂಕಿನಿಂದಾಗಿ ಎದುರಾದ ಸವಾಲುಗಳ ನಡುವೆಯೂ, ಈ ಹಬ್ಬವನ್ನು ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತವನ್ನು ಸಾಧಿಸುವ ಕನಸಿಗೆ ಅನುಗುಣವಾಗಿ, ಕಲ್ಲಡ್ಕಾದ ಶ್ರೀ ರಾಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಗೋವಿನ ಸೆಗಣಿಯನ್ನು ಕಚ್ಚಾ ವಸ್ತುವಾಗಿ ಬಳಸಿಕೊಂಡು ದೀಪಾವಳಿಗಾಗಿ ಹಣತೆಯನ್ನು ಸಿದ್ಧಪಡಿಸುತ್ತಿದ್ದಾರೆ.

ವಿದೇಶಿ ವಸ್ತುಗಳನ್ನು ತ್ಯಜಿಸಿ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಸುವಿನ ಸೆಗಣಿ ಹಾಗೂ ಗೋಮೂತ್ರವನ್ನು ಹಣತೆ ಮಾಡಲು ಬಳಸುತ್ತಿದ್ದಾರೆ.
ಈ ಹಣತೆಗಳನ್ನು ತಯಾರಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು ಸುಮಾರು 10,000 ಹಣತೆ ತಯಾರಿಯ ಗುರಿಯನ್ನು ಶಿಕ್ಷಣ ಸಂಸ್ಥೆಯು ಹೊಂದಿದೆ. ಪ್ರಸ್ತುತ 2,500 ಕ್ಕೂ ಹೆಚ್ಚು ಹಣತೆಗಳನ್ನು ತಯಾರಿಸಲಾಗಿದೆ.
ಮೊದಲು ಹಸುವಿನ ಸೆಗಣಿಯನ್ನು ಸಂಗ್ರಹಿಸಿ ಅದನ್ನು ಅಚ್ಚುಗಳ ಮೂಲಕ ಒತ್ತಲಾಗುತ್ತದೆ. ಬಳಿಕ ಈ ಅಚ್ಚಿನಲ್ಲಿ ಮೂಡಿ ಬಂದ ಹಣತೆಯನ್ನು ಸೂರ್ಯನ ಬಿಸಿಲಿನ ಶಾಖದಲ್ಲಿ ಒಣಗಳು ಇರಿಸಲಾಗುತ್ತದೆ.
ಶ್ರೀ ರಾಮ ಪಿಯು ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಕಾಯರ್ಕಟ್ಟೆ ಈ ಹಣತೆ ತಯಾರಿ ಕಾರ್ಯದ ನಿರ್ವಾಹಕರಾಗಿದ್ದಾರೆ. ಸಂಸ್ಥೆಯ ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳು ಕೂಡಾ ಇದಕ್ಕೆ ಕೈ ಜೋಡಿಸಿದ್ದಾರೆ. ಸುಮಾರು 50 ವಿದ್ಯಾರ್ಥಿಗಳು ಮತ್ತು 10 ಆಸಕ್ತ ಪೋಷಕರು ಮತ್ತು ಎಂಟು ಸಿಬ್ಬಂದಿಗಳು ಈ ಕಾರ್ಯದಲ್ಲಿ ತೊಡಗಿದ್ದು ಅವರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಇನ್ನು ಹಣತೆಯನ್ನು ತಯಾರಿಸಲು ಭರಿಸಲಾದ ಖರ್ಚಿಗೆ ಸರಿಹೊಂದುವಂತೆ, ಈ ಹಣತೆಯನ್ನು ತಲಾ 5 ರೂ.ಗೆ ಮಾರಾಟ ಮಾಡಲು ಯೋಜಿಸಲಾಗಿದೆ. ಹಾಗೆಯೇ ಈ ಹಣತೆ ಮಾರಾಟದ ಹೊಣೆಯನ್ನು ಈ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವಹಿಸಿಕೊಂಡಿದ್ದು ಆನ್ಲೈನ್ ಬುಕ್ಕಿಂಗ್ ಮೂಲಕ ಇ-ಮಾರ್ಕೆಟಿಂಗ್ ವ್ಯವಸ್ಥೆ ಮಾಡಿದ್ದಾರೆ.
ಇನ್ನು ಸೆಗಣಿಯಿಂದ ಮಾಡಿದ ಹಣತೆಯೊಂದಿಗೆ ಸುಮಾರು 500 ಮಣ್ಣಿನ ಹಣತೆಗಳನ್ನು ಕೂಡಾ ತಯಾರಿಸಲಾಗಿದೆ. ಸೆಗಣಿಯಿಂದ ಸಿದ್ದಪಡಿಸಿದ ಹಣತೆಗೆ ಎಣ್ಣೆ ಅಥವಾ ತುಪ್ಪವನ್ನು ಬಳಸಬೇಕಾಗಿದ್ದು ಸುಮಾರು 45 ನಿಮಿಷಗಳ ಕಾಲ ದೀಪ ಬೆಳಗಬಹುದಾಗಿದೆ. ಬಳಿಕ ಹಣತೆಯನ್ನೇ ಸುಟ್ಟುಹಾಕಿದರೂ ಯಾವುದೇ ಹಾನಿ ಉಂಟಾಗುವುದಿಲ್ಲ.