ಮಂಗಳೂರು, ನ.11 (DaijiworldNews/PY): "ಕಾಂಗ್ರೆಸ್ನ ಕಣ್ಣೀರಿನ ರಾಜಕಾರಣ ಜನರಿಗೆ ಗೊತ್ತಾಗಿದೆ. ಜನತೆ ಬಂಡೆಯನ್ನು ಹುಡಿ ಮಾಡಿದ್ದಾರೆ. ಹುಲಿಯನ್ನ ಗೂಡಿಗೆ ಕಳುಹಿಸಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.


ಶಿರಾ, ಆರ್.ಆರ್. ನಗರ ಉಪಚುನಾವಣೆ ಗೆಲುವಿನ ಹಿನ್ನೆಲೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಶಿರಾದಲ್ಲಿ ಸಂಘಟನಾತ್ಮಕ ಕಾರ್ಯ ಯಶಸ್ವಿಯಾಗಿದೆ. ಕೇಂದ್ರ ನಾಯಕರ ತಂತ್ರಗಾರಿಕೆ ಫಲಿಸಿದೆ. ಮೂರು ತಿಂಗಳ ಕಾಲ ಕಾರ್ಯಕರ್ತರು ಶ್ರಮವಹಿಸಿದ್ದಾರೆ. ಮೂರು ತಿಂಗಳ ತಂತ್ರಗಾರಿಕೆಗೆ ಉತ್ತಮ ಫಲಿತಾಂಶ ಸಿಕ್ಕಿದೆ. ನಾವು ಮುಂದಿನ ಚುನಾವಣೆಗೂ ತಂತ್ರಗಾರಿಕೆ ಆರಂಭಿಸಿದ್ದೇವೆ" ಎಂದು ತಿಳಿಸಿದರು.
"ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ ಅನ್ನೋದನ್ನ ಜನತೆ ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ನ ಕಣ್ಣೀರಿನ ರಾಜಕಾರಣ ಜನರಿಗೆ ಗೊತ್ತಾಗಿದೆ. ಜನತೆ ಬಂಡೆಯನ್ನು ಹುಡಿ ಮಾಡಿದ್ದಾರೆ. ಹುಲಿಯನ್ನ ಗೂಡಿಗೆ ಕಳುಹಿಸಿದ್ದಾರೆ" ಎಂದರು.
ಸಿದ್ದರಾಮಯ್ಯ ಅವರು ಮೋದಿ ಅಲೆ ಎಲ್ಲಿ ಎಂದು ಕೇಳಿದ್ದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, "ಈಗ ಕರ್ನಾಟಕ ಜನತೆ ಕೇಳುತ್ತಿದ್ದಾರೆ ನಿಮ್ಮ ಗೂಡೆಲ್ಲಿ?. ಸಿದ್ದರಾಮಯ್ಯನವರೇ, ಹಗಲು ಕನಸು ಕಾಣುವುದನ್ನು ಬಿಡಿ" ಎಂದು ತಿಳಿಸಿದರು.
ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಬಿಜೆಪಿಯಲ್ಲಿ ನಾಯಕತ್ವದ ಪ್ರಶ್ನೆ ಉದ್ಭವಿಸಿಲ್ಲ. ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪನವರೇ ಸಿಎಂ" ಎಂದು ಹೇಳಿದರು.
ಬೆಂಗಳೂರು ಗಲಭೆ ಬಗ್ಗೆ ಮಾತನಾಡಿದ ಅವರು, "ಅಖಂಡ ಶ್ರೀನಿವಾಸಮೂರ್ತಿ ಸಿದ್ದರಾಮಯ್ಯ ಬೆಂಬಲಿಗ. ಆ ಕಾರಣದಿಂದ ಡಿಕೆಶಿ ಬೆಂಬಲಿಗ ಸಂಪತ್ ಕುಮಾರ್ ಬೆಂಕಿ ಇಟ್ಟಿದ್ದಾರೆ. ಸಂಪತ್ ಕುಮಾರ್ ಅಡಗಿಸಿಡಲು ಡಿಕೆಶಿ ಸಹಾಯ ಮಾಡಿದ್ದಾರೆ. ದಲಿತ ಶಾಸಕನನ್ನ ರಕ್ಷಿಸಲಾಗದ ಕಾಂಗ್ರೆಸ್ ಸಂಪತ್ ಕುಮಾರ್ ಅವರನ್ನು ರಕ್ಷಿಸಿದೆ" ಎಂದರು.
"ಬಂಟ್ವಾಳದಲ್ಲಿ ಕಾಂಗ್ರೆಸ್-ಎಸ್ಡಿಪಿಐ ಹೊಂದಾಣಿಕೆ. ಇದು ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯ ಮುಂದುವರಿದ ಭಾಗ. ಕಾಂಗ್ರೆಸ್-ಎಸ್ಡಿಪಿಐ ಒಪ್ಪಂದದ ಒಂದು ಭಾಗ. ಕಾಂಗ್ರೆಸ್ ಕಾರ್ಯಕರ್ತರ ವಿಶ್ವಾಸ ಉಳಿಸಿಕೊಳ್ಳಲಿ. ಇಲ್ಲದಿದ್ದರೆ, ನಿಮ್ಮನ್ನ ಅರಬ್ಬೀ ಸಮುದ್ರಕ್ಕೆ ಎಸೆಯುತ್ತಾರೆ" ಎಂದು ತಿಳಿಸಿದರು.