ಸುಳ್ಯ,ಜೂ.02: ನ್ಯಾಯವಾದಿ ಹಾಗೂ ಜೇಸಿಐ ರಾಷ್ಟ್ರೀಯ ತರಬೇತುದಾರ ಬಿ.ಎಸ್.ಶರೀಫ್(48) ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು ಆಲೆಟ್ಟಿ ಗ್ರಾಮದ ಅರಂಬೂರಿನ ನಿವಾಸಿ, ಕಾಂಗ್ರೆಸ್ ಮುಖಂಡ ಬಾಪೂಸಾಹೇಬ್ ಅವರ ಪುತ್ರರಾಗಿದ್ದು, ಸುಳ್ಯದ ಜೇಸಿಐಯ ಅಧ್ಯಕ್ಷರಾಗಿ, ಜೇಸಿಐ ರಾಷ್ಟ್ರೀಯ ತರಬೇತುದಾರರಾಗಿ, ಹಲವಾರು ವರ್ಷಗಳಿಂದ ಶಾಲಾ-ಕಾಲೇಜು, ಪಂಚಾಯಿತಿ ಸದಸ್ಯರುಗಳಿಗೆ ರಾಜ್ಯಾದ್ಯಂತ ತರಬೇತಿಗಳನ್ನು ನೀಡುತ್ತಿದ್ದರು. ಅಲ್ಲದೆ ತಾಲೂಕಿನ ನಾನಾ ಸಂಘಸಂಸ್ಥೆಗಳ ಕಾನೂನು ಸಲಹೆಗಾರರಾಗಿದ್ದರು. ಅಲ್ಲದೆ ಸುಳ್ಯ ರೋಟರಿಕ್ಲಬ್ ಸಿಟಿ ಅಧ್ಯಕ್ಷರಾಗಿ, ಗ್ರೀನ್ವ್ಯೂ ಶಿಕ್ಷಣ ಸಂಸ್ಥೆಯ ಸಂಚಾಲಕರಾಗಿ, ಅನ್ಸಾರಿಯಾ ಅನಾಥಾಲಯದ ನಿರ್ದೇಶಕ, ಮೊಗರ್ಪಣೆ ಜುಮಾ ಮಸೀದಿಯ ಉಪಾಧ್ಯಕ್ಷ, ಕಾರು-ವ್ಯಾನ್ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷರಾಗಿ ಹೀಗೆ ನಾನಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿದ್ದರು. ಸುಳ್ಯ ತಾಲೂಕಿನಾದ್ಯಂತ ಚಿರಪರಿಚಿತರಾಗಿದ್ದು, ಸೌಹಾರ್ದತೆಗೆ ಒತ್ತುಕೊಡುತ್ತಿದ್ದರು. ಇವರು ಎಂದಿನಂತೆ ಬೆಳಗ್ಗಿನ ಜಾವ 4.30ರ ವೇಳೆ ನಮಾಜ್ ಮುಗಿಸಿ ಮನೆಯಲ್ಲಿ ರೂಮಿಗೆ ತೆರಳಿ ಬಾಗಿಲು ಹಾಕಿ ಪ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶರೀಫ್ ಅವರ ಆತ್ಮಹತ್ಯೆಗೆ ಆರ್ಥಿಕ ಮುಗ್ಗಟ್ಟು ಕಾರಣವೆನ್ನಲಾಗುತ್ತಿದೆ.