ಮಂಗಳೂರು, ನ. 11 (DaijiworldNews/SM): ಬಜ್ಪೆಯಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇಗಾಗಲೇ ಖಾಸಗಿ ನಿರ್ವಹಣೆಗೆ ಹಸ್ತಾಂತರಿಸಲಾಗಿದ್ದು, ಇದಾದ ಹಲವು ದಿನಗಳ ಬಳಿಕ ಇದೀಗ ಕಾಂಗ್ರೆಸ್ ಮುಖಂಡರು ಎಚ್ಚೆತ್ತುಕೊಂಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವ ಅಭಯಚಂದ್ರ ಜೈನ್ ಇದೀಗ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ವಿಮಾನ ನಿಲ್ದಾಣ ಅದಾನಿ ಸಂಸ್ಥೆಗೆ ನೀಡಿರುವುದರ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ವಾರಕ್ಕೊಂದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮೋದಿ ಸರಕಾರ ಯಾವ ರೀತಿ ಜನತೆಗೆ ತೊಂದರೆ ನೀಡುತ್ತಿದ್ದಾರೆ ಎಂಬುವುದು ಇದೀ ರಾಷ್ಟ್ರಕ್ಕೆ ಗೊತ್ತಾಗಬೇಕು. ಈ ಹಿನ್ನೆಲೆಯಲ್ಲಿ ವಾರಕ್ಕೊಂದು ಪ್ರತಿಭಟನೆ ನಡೆಸಲಾಗುವುದು. ಇನ್ನು ತುಳುನಾಡಿನಲ್ಲಿ ಹಲವು ರೀತಿಯಲ್ಲಿ ಅಭಿವೃದ್ಧಿಗೆ ಕಾರಣರಾದವರನ್ನು ಇಂದು ಮೂಲೆಗುಂಪು ಮಾಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಯಾರಲ್ಲೂ ಕೂಡ ಕೇಳದೆ ಅದಾನಿ ಸಂಸ್ಥೆ ನೀಡಲಾಗಿದ್ದು, ಅದಾನಿ ಹೆಸರಿನಡಿಯಲ್ಲೇ ಇದೀಗ ವಿಮಾನ ನಿಲ್ದಾಣ ನಿರ್ವಹಣೆಗೊಳಪಟ್ಟಿದೆ. ಮಂಗಳೂರಿಗೆ ಯಾವುದೇ ಕೊಡುಗೆ ನೀಡದೆ ಇರುವ ಅದಾನಿಯವರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣ ನೀಡಿರುವುದು ಖಂಡನೀಯವಾಗಿದೆ ಎಂದು ಅಭಯಚಂದ್ರ ಜೈನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರಾವಳಿ ಭಾಗದ ಜನನಾಯಕರ ಸತತ ಪ್ರಯತ್ನದಿಂದಾಗಿ ಮಂಗಳೂರು ವಿಮಾನ ನಿಲ್ದಾಣ ನಿರ್ಮಾಣಗೊಂಡು ಅಭಿವೃದ್ಧಿಗೊಂಡಿದೆ. ಆದರೆ, ಇದೀಗ ಅದಾನಿ ಸಂಸ್ಥೆಗೆ ನೀಡಿದ ಸಂದರ್ಭದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಜಿಲ್ಲೆಯ ಜನ ನಾಯಕರು ಮೌನವಾಗಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಖಾಸಗೀಕರಣ ವಿರೋಧಿಸಿ ಈಗಾಗಲೇ ಪ್ರತಿಭಟನೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿವಾರದಲ್ಲಿ ಒಂದು ದಿನ ಕೆಂಜಾರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅಭಯಚಂದ್ರ ಜೈನ್ ತಿಳಿಸಿದ್ದಾರೆ.