ಮಂಗಳೂರು, ಮಂಗಳೂರು, ನ. 11 (DaijiworldNews/SM): ಪ್ರಕೃತಿಗೆ ಅರಗಿಸಿಕೊಳ್ಳಲಾಗದ ಏಕೈಕ ವಸ್ತುವೆಂದರೆ ಇಂದಿನ ದಿನಗಳಲ್ಲಿ ಅತ್ಯಧಿಕ ಹಾಗೂ ನಿರಾಸಾದಾಯಕವಾಗಿ ಬಳಕೆಯಲ್ಲಿರುವ ಪ್ಲಾಸ್ಟಿಕ್. ಬಹುತೇಕ ಎಲ್ಲೆಲ್ಲೂ ಬಳಕೆಯಲ್ಲಿರುವುದು ಪ್ಲಾಸ್ಟಿಕ್ ನಿಂದ ತಯಾರಿಸಿರುವ ವಸ್ತುಗಳು. ಕೆಲವು ಪ್ಲಾಸ್ಟಿಕ್ ಗಳನ್ನು ಪುನರ್ ಬಳಕೆ ಮಾಡಲಾಗುತ್ತಿದ್ದರೂ, ಬಹುತೇಕ ಪ್ಲಾಸ್ಟಿಕ್ ಗಳನ್ನು ರಿಸೈಕಲ್ ಮಾಡುವುದು ಅಂದುಕೊಂಡಷ್ಟು ಸುಲಭದ ಮಾತಲ್ಲ. ಆದರೆ, ಮಂಗಳೂರಿನಲ್ಲೊಬ್ಬ ಯುವಕ ಸಾಹಸಪಟ್ಟು ಮರು ಬಳಕೆಯಾಗದ ಪ್ಲಾಸ್ಟಿಕನ್ನು ಕಚ್ಛಾ ವಸ್ತುವನ್ನಾಗಿರಿಸಿಕೊಂಡು ಮನೆ ನಿರ್ಮಾಣ ಮಾಡಿದ್ದು, ಹೊಸ ಶಕೆಯೊಂದಕ್ಕೆ ನಾಂದಿ ಹಾಡಿದ್ದಾರೆ.





ಕಸದ ತೊಟ್ಟಿಗೆ ಹಾಕಲಾಗುವ ತ್ಯಾಜ್ಯದಿಂದ ಆಯ್ದ ಚಿಪ್ಸ್, ಪಾನ್ಪಾರಾಗ್ನಂತಹ ಮರು ಮೌಲ್ಯವಿಲ್ಲದ ಚಿಂದಿ ಪ್ಲಾಸ್ಟಿಕ್ಗಳನ್ನು ಉಪಯೋಗಿಸಿಕೊಂಡು ನಗರದ ಪಚ್ಚನಾಡಿಯಲ್ಲಿ ಮನೆ ನಿರ್ಮಾಣ ಮಾಡಿದ್ದು, ಎಲ್ಲರ ಗಮನ ಅತ್ತ ನೆಟ್ಟಿದೆ. ಕಾಂಕ್ರೀಟ್ ಅಡಿಪಾಯದೊಂದಿಗೆ ಮನೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ.ಆದರೆ, ಮನೆಯ ಗೋಡೆಗೆ ಬಳಕೆಯಾಗಿರುವುದು 1500 ಕಿಲೋ ಪ್ಲಾಸ್ಟಿಕ್. ಅಚ್ಚರಿ ಎನಿಸಿದರೂ ನಂಬಲೇ ಬೇಕಾಗಿರುವ ಸತ್ಯ.
350 ಚದರ ಅಡಿಯ ಮನೆಯನ್ನು ಪ್ಲಾಸ್ಟಿಕ್ ಫೋರ್ ಚೇಂಜ್ ಇಂಡಿಯಾ ಫೌಂಡೇಶನ್, ಮಹಾನಗರ ಪಾಲಿಕೆಯ ನಿವೃತ್ತ ಪೌರ ಕಾರ್ಮಿಕೆ ಕಮಲಾ ಎಂಬವರಿಗೆ ಉಚಿತವಾಗಿ ನಿರ್ಮಿಸಿಕೊಟ್ಟಿದೆ.
ಮರುಬಳಕೆಯಾಗದ ಪ್ಲಾಸ್ಟಿಕ್ ಉಪಯೋಗಿಸಿ ಮಾಡಲಾದ ಈ ಮನೆ ಕರ್ನಾಟಕದಲ್ಲಿ ಪಚ್ಚನಾಡಿಯಲ್ಲಿ ಪ್ರಥಮ ಪ್ರಯೋಗವಾಗಿದೆ. ಗಾಳಿ, ಮಳೆ, ಅಗ್ನಿಯಿಂದ ಸುರಕ್ಷಿತವಾಗಿರುವುದು ಮಾತ್ರವಲ್ಲದೆ 30 ವರ್ಷ ಬಾಳಿಕೆಯನ್ನು ಹೊಂದಿದೆ ಎನ್ನುತ್ತಾರೆ ಫೌಂಡೇನ್ನ ಯೋಜನಾ ನಿರ್ದೇಶಕ ಚಂದನ್. ಪಚ್ಚನಾಡಿ ಡಂಪಿಂಗ್ ಯಾರ್ಡ್ ಸೇರಿದಂತೆ ನಾನಾ ಕಡೆಗಳಲ್ಲಿ ಚಿಂದಿ ಆಯುವವರಿಂದ ಸಂಗ್ರಹಿಸಿದ ಮರು ಮೌಲ್ಯವಿಲ್ಲದ ಪ್ಲಾಸ್ಟಿಕ್ ಉಪಯೋಗಿಸಿ ಈ ಮನೆಯನ್ನು ರಚನೆ ಮಾಡಲಾಗಿದೆ. ಪ್ಲಾಸ್ಟಿಕ್ ಬಾಟಲ್ಗಳನ್ನು ಮರು ಬಳಕೆ ಮಾಡಿ ಉಪಯೋಗಿಸಬಹುದಾದರೂ, ಕಸದ ಜತೆ ಸೇರುವ ಸಣ್ಣ ಪುಟ್ಟ ಪ್ಲಾಸ್ಟಿಕ್ ಗಳನ್ನು ಸಿಮೆಂಟ್ ಇಂಡಸ್ಟ್ರಿಯಲ್ಲಿ ಬಳಕೆಗಾಗಿ ಒಯ್ಯಲಾಗುತ್ತಿದ್ದು, ಅದು ಅಲ್ಲಿ ಉರಿದು ಹೋಗುತ್ತದೆ. ಅಂತಹ ಮರು ಮೌಲ್ಯವಿಲ್ಲದ ಪ್ಲಾಸ್ಟಿಕ್ಗಳನ್ನು ಚಿಂದಿ ಆಯುವವರಿಂದ, ಗುಜರಿ ಅಂಗಡಿಗಳಿಂದ ಸಂಗ್ರಹಿಸಲಾಗುತ್ತದೆ ಎಂಬುವುದಾಗಿ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಫೌಂಡೇಶನ್ ಜೊತೆ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿರುವ ಹೈದರಾಬಾದ್ನ ಬಾಂಬೂ ಹೌಸ್ ಜತೆ ಸೇರಿ ಸಂಗ್ರಹಿಸಿದ ಪ್ಲಾಸ್ಟಿಕನ್ನು ಗುಜರಾತ್ಗೆ ಕಳುಹಿಸಿ ಅಲ್ಲಿ ಕಂಪ್ರೆಸ್ ಮಾಡಿಸಲಾಗುತ್ತದೆ. ಅದರಲ್ಲಿನ ದುರ್ವಾಸನೆಯನ್ನು ಹೋಗಲಾಡಿಸಲು ರಾಸಾಯನಿಕ ಬಳಸಿ ಪ್ಯಾನೆಲ್ಗಳನ್ನು ತಯಾರಿಸಲಾಗುತ್ತದೆ. 8 ಎಂಎಂನಿಂದ 20 ಎಂಎಂವರೆಗಿನ ಪ್ಯಾನೆಲ್ಗಳನ್ನು ತಯಾರಿಸಿಕೊಂಡು ಅದಕ್ಕೆ ಕಬ್ಬಿಣದ ಫ್ಯಾಬ್ರಿಕೇಶನ್ ವರ್ಕ್ನೊಂದಿಗೆ ಮನೆ ನಿರ್ಮಾಣ ಮಾಡಲಾಗಿದೆ. ಇಂತಹ ಮನೆಗಳು ಮಳೆ, ಬಿಸಿಲು ಬೆಂಕಿಯಿಂದ ಸುರಕ್ಷಿತವಾಗಿವೆ. ಪ್ರಸ್ತುತ ನಿರ್ಮಿಸಿರುವುದು ಒಂದೇ ಮನೆಯಾಗಿರುವುದರಿಂದ ಅಲ್ಪ ಪ್ರಮಾಣದಲ್ಲಿ ವೆಚ್ಚ ಹೆಚ್ಚಳವಾಗಿದೆ. ಮುಂದೆ ಏಕಕಾಲದಲ್ಲಿ ಹಲವು ಮನೆಗಳನ್ನು ನಿರ್ಮಿಸಿದ್ದಲ್ಲಿ ವೆಚ್ಚ ಕಡಿಮೆಯಾಗಲಿದೆ. ಜೋಪಡಿಗಳಲ್ಲಿ ಬದುಕು ಕಟ್ಟಿಕೊಂಡವರಿಗೆ ಮುಂದಿನ ದಿನಗಳಲ್ಲಿ ಹೊಸ ದಿಸೆಯನ್ನು ತೋರಲಿವೆ ಇಂತಹ ಪ್ಲಾಸ್ಟಿಕ್ ಮನೆಗಳು.