ಕುಂದಾಪುರ ಸೆ 24: ಪ್ರೀತಿಗೆ ಗಡಿ, ಭಾಷೆ, ಜಾತಿ ಎನೋ ಕಟ್ಟುಪಾಡುಗಳಿಲ್ಲ ಅನ್ನೋದನ್ನ ಇಲ್ಲೊಂದು ಯುವ ಜೋಡಿ ಸಾಬೀತು ಮಾಡಿದ್ದಾರೆ. ಇಲ್ಲಿನ ಕೋಟದ ಪಡುಕರೆಯ ಯುವತಿಯೋರ್ವಳು ನೇಪಾಳ ಮೂಲದ ಇದೀಗ ಅಸ್ಸಾಂನ ನಿವಾಸಿಯಾಗಿರುವ ಯುವಕನನ್ನು ಪ್ರೀತಿಸಿ ಸೆ.21ರಂದು ಮಣೂರು ರಾಜಲಕ್ಷ್ಮೀ ಸಭಾಭವನದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದರು.
ಇಲ್ಲಿನ ಕೋಟ ಪಡುಕರೆಯ ನಿವಾಸಿ ದೀಪಾ (21) ಹಾಗೂ ನೇಪಾಳ ಮೂಲದ ಉಪೆನ್ ಡೈಮಾರ್ (23) ದಂಪತಿಗಳೆ ಈ ನವ ಜೋಡಿಗಳು.ಇವರು ಸುಮಾರು ಐದು ವರ್ಷದಿಂದ ಮಣೂರಿನ ಫಿಶ್ಮಿಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಉಪೆನ್ ಅವರು ಅಲ್ಲೇ ಕೆಲಸ ನಿರ್ವಹಿಸುತ್ತಿದ್ದ ದೀಪಾಳನ್ನು ಪ್ರೀತಿಸುತ್ತಿದ್ದು ಇದೀಗ ಗೃಹಸ್ಥ ಆಶ್ರಮಕ್ಕೆ ಕಾಲಿರಿಸಿದ್ದಾರೆ. ಹುಡುಗಿಯ ಕಡೆಯಿಂದ ಸ್ಥಳೀಯ ಮಂದಿ ಹಾಗೂ ನೇಪಾಳದಿಂದ ಹುಡುಗನ ಕಡೆಯವರು ಮದುವೆಗೆ ಆಗಮಿಸಿದ್ದರು. ಒಟ್ಟಾರೆಯಾಗಿ ದೇಶ ಭಾಷೆಯನ್ನು ಮೀರಿದ ಶುಭವಿವಾಹಕ್ಕೆ ಸ್ಥಳೀಯ ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.