ಮಂಗಳೂರು, ನ. 12 (DaijiworldNews/MB) : ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜೀವಂತವಿರುವವರೆಗೂ ಅಧಿಕಾರದಲ್ಲಿ ಇರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಗಲಭೆ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ರನ್ನು ಡಿ ಕೆ ಶಿವಕುಮಾರ್ ಅಡಗಿಸಿಟ್ಟಿದ್ದಾರೆ ಎಂಬ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ''ನಾನು ಸಂಪತ್ ರಾಜ್ನನ್ನು ಅಡಗಿಸಿಟ್ಟಿದ್ದರೆ ನನ್ನನ್ನು ಬಂಧನ ಮಾಡಬಹುದಲ್ಲಾ? ನಳಿನ್ ಕುಮಾರ್ ಕಟೀಲ್ ಏನು ಹೋಮ್ ಮಿನಿಸ್ಟರಾ'' ಎಂದು ಪ್ರಶ್ನಿಸಿದರು.
''ನಳಿನ್ ಅವರು ನನಗೆ ಯಾವೆಲ್ಲಾ ತೊಂದರೆಗಳನ್ನು ಕೊಡಲು ಯೋಜನೆ ಹಾಕುತ್ತಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿಯಿದೆ'' ಎಂದು ಹೇಳಿದ ಅವರು, ''ನಳಿನ್ ಜೀವಂತವಾಗಿ ಇರುವವರೆಗೂ ಅಧಿಕಾರದಲ್ಲಿರುತ್ತಾರೆ'' ಎಂದು ವ್ಯಂಗ್ಯವಾಡಿದರು.
ಇನ್ನು ಈ ಸಂದರ್ಭದಲ್ಲೇ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ವಿಚಾರವಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, ''ಪ್ರಜಾಪ್ರಭುತ್ವದಲ್ಲಿ ಸೋಲನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಸೋಲಿನ ಅಂತರದ ಬಗ್ಗೆ ಬಹಳಷ್ಟು ಚರ್ಚೆ ನಡೆಸಲಾಗುತ್ತಿದೆ. ಭಾರೀ ಅಂತರದಲ್ಲಿ ಸೋಲು ಕಂಡಿದ್ದು ಅನುಮಾನಕ್ಕೆ ಕಾರಣವಾಗಿದ್ದು ಈ ಬಗ್ಗೆ ಬೂತ್ ಮಟ್ಟದಲ್ಲಿ ಸಮಗ್ರ ಅಧ್ಯಯನ ನಡೆಸಲಿದ್ದೇವೆ. ತಜ್ಞರನ್ನು ಸಮಾಲೋಚಿಸಿ ಪರಾಮರ್ಶೆ ನಡೆಸಲಿದ್ದೇವೆ'' ಎಂದು ಹೇಳಿದರು.
ಹಾಗೆಯೇ, ''ವಿದ್ಯಾವಂತ ಮತದಾರರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದಾರೆ'' ಎಂದು ಕೂಡಾ ಹೇಳಿದರು.