ಬೆಂಗಳೂರು,ಜೂ.02: ಕಲರ್ಸ್ ಮನರಂಜನಾ ವಾಹಿನಿಯ ಹಿಟ್ ಸೀರಿಯಲ್ ' ಅಗ್ನಿಸಾಕ್ಷಿ' ಸೀರಿಯಲ್ ನಲ್ಲಿ ನಟಿಸಿ ಮಿಂಚಿದವರು ಸನ್ನಿಧಿ. ಇಂತಹ ನಟಿಯರನ್ನ ಹಾಕಿ ಸಿನಿಮಾ ಮಾಡುವುದು ತುಂಬಾ ಹಿಂದಿನಿಂದಲೂ ಕನ್ನಡ ಸೇರಿ ವಿವಿಧ ಭಾಷೆಯ ಚಿತ್ರರಂಗದಲ್ಲಿ ಪ್ರಯೋಗ ನಡೆಯುತ್ತಿರುತ್ತದೆ.
ಇತ್ತೀಚಿಗೆ ಅಶ್ವಿನಿ ನಕ್ಷತ್ರದ ಮಯೂರಿ, ಪುಟ್ಟ ಗೌರಿ ಮದುವೆಯ ರಂಜನಿ ರಾಘವನ್, ಲಕ್ಷ್ಮೀ ಬಾರಮ್ಮ ದ ಕವಿತಾ ಗೌಡ ಹೀಗೆ ಸಾಕಷ್ಟು ಕಿರುತೆರೆಯ ನಟಿಯರು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಅದೇ ಗುಂಪಿಗೆ ಗುಳಿಕೆನ್ನೆ ಚೆಲುವೆ, ಮುಗೂತಿ ಸುಂದರಿ ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ಸನ್ನಿಧಿ ಅಲಿಯಾಸ್ ವೈಷ್ಣವಿ ಸೇರಿಕೊಂಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿ ಅಭಿಮಾನಿಗಳನ್ನ ಸಂಪಾದಿಸಿದ ಸನ್ನಿಧಿ ಧಾರಾವಾಹಿಯನ್ನ ಹೊರತುಪಡಿಸಿ ಒಂದೆರಡು ರಿಯಾಲಿಟಿ ಶೋ ಗಳನ್ನ ಕೂಡಾ ಮಾಡಿ ಭೇಷ್ ಎನಿಸಿಕೊಂಡಿದ್ದರು.
ರಿಯಾಲಿಟಿ ಶೋ ಮತ್ತು ಧಾರಾವಾಹಿ ಎರಡನ್ನ ಬ್ಯಾಲೆನ್ಸ್ ಮಾಡಿಕೊಂಡು ಬರುತ್ತಿರುವ ವೈಷ್ಣವಿ ಇದೀಗ ಸಿನಿಮಾದ ನಾಯಕಿಯಾಗಿ ಪ್ರೊಮೋಷನ್ ಗಳಿಸಿಕೊಂಡಿದ್ದಾರೆ. ಹೌದು. ಶೂಟಿಂಗ್ ಹಂತದಲ್ಲಿರುವ 'ಗಿರಿಗಿಟ್ಟಲೆ' ಎಂಬ ಹೊಸಬರೇ ಸೇರಿಕೊಂಡು ಮಾಡಿದ ಸಿನಿಮಾದಲ್ಲಿ ವೈಷ್ಣವಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಮೋರ್ಡನ್ ಹುಡುಗಿಯ ಪಾತ್ರದಲ್ಲಿ ವೈಷ್ಣವಿ ಕಾಣಿಸಲಿದ್ದಾರೆ. ಇದರ ಬಗ್ಗೆ ಮಾತನಾಡಿದ ವೈಷ್ಣವಿ, ಈ ಸಿನಿಮಾದಲ್ಲಿ ನಾನು ಈಗಿನ ಟ್ರೆಂಡ್ ಗೆ ತಕ್ಕಂತ ಹುಡುಗಿಯ ಪಾತ್ರವನ್ನ ಮಾಡಿದ್ದೇನೆ. ಈ ಪಾತ್ರದಲ್ಲಿ ಅವಳಿಗೆ ಏನು ಸರಿ ಅನ್ನಿಸುತ್ತದೆಯೋ ಅದನ್ನೇ ಮಾಡುತ್ತಾಳೆ. ಯಾರಿಗೂ ಕೇರ್ ಮಾಡದ ವ್ಯಕ್ತಿತ್ವ ಅವಳದ್ದು ಎನ್ನುತ್ತಾರೆ.
ಈ ಸಿನಿಮಾದಲ್ಲಿ ರಂಗಾಯಣ ರಘು ತಂದೆಯ ಪಾತ್ರವನ್ನ ಮಾಡುತ್ತಿದ್ದಾರೆ. ಈ ಚಿತ್ರವನ್ನ ರವಿಕಿರಣ್ ನಿರ್ದೇಶನ ಮಾಡುತ್ತಿದ್ದಾರೆ. ಚಂದ್ರಶೇಖರ್, ಗುರುರಾಜ್ ಮತ್ತು ಪ್ರದೀಪ್ ರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ.
ಈಗಾಗಲೇ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಗಿರೀಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶೀಘ್ರದಲ್ಲೇ ಈ ಸಿನೆಮಾ ರಿಲೀಸ್ ಆಗಲಿದೆ.