ಬಂಟ್ವಾಳ,ಜೂ.02: ಕುಡಿದ ಮತ್ತಿನಲ್ಲಿ ಮಾವ ಮತ್ತು ಅಳಿಯನ ನಡುವಿನ ವಾಗ್ವಾದ ತಾರಕಕ್ಕೇರಿ ಹೊಡೆದಾಟ ನಡೆದು ಅಳಿಯನ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ಮಣಿನಾಲ್ಕೂರು ಗ್ರಾಮದಲ್ಲಿ ನಡೆದಿದೆ.
ಬಂಟ್ವಾಳದ ಬಡೆಕೊಟ್ಟು ನಿವಾಸಿ ರಮಾನಂದ(52) ಮೃತ ದುರ್ದೈವಿಯಾಗಿದ್ದು, ಮಾವ ಅಮ್ಮನ್ನ ಪೂಜಾರಿ (70)ಕೊಲೆಗೈದ ಆರೋಪಿ ಎಂದು ಹೇಳಲಾಗಿದೆ. ಮೂಲತಃ ಬಣಕಲ್ ನಿವಾಸಿ ರಮಾನಂದ ಕಳೆದ ಹಲವು ವರ್ಷಗಳಿಂದ ತನ್ನ ಪತ್ನಿ ಮೋಹಿನಿಯ ತಂದೆ ಅಮ್ಮನ್ನ ಪೂಜಾರಿಯವರ ಮನೆಯಲ್ಲಿ ವಾಸ್ತವ್ಯವಿದ್ದರು. ರಮಾನಂದ ಮೋಹಿನಿ ದಂಪತಿಗಳಿಗೆ ಮೂವರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳಿಗೆ ಕೆಲ ತಿಂಗಳ ಹಿಂದೆಯಷ್ಟೇ ಮದುವೆ ನಡೆದಿದ್ದು, ಇನ್ನಿಬ್ಬರು ಹೆಣ್ಣುಮಕ್ಕಳು ಮೂಡಬಿದಿರೆಯ ಬಟ್ಟೆಮಳಿಗೆಯಲ್ಲಿ ದುಡಿಯುತ್ತಿದ್ದಾರೆ. ಪತ್ನಿ ಮೋಹಿನಿ ಹತ್ತಿರದ ಮನೆಗಳಲ್ಲಿ ಮನೆಕೆಲಸ ನಿರ್ವಹಿಸುತ್ತಿದ್ದಾರೆ.
ಕಳೆದ ಕೆಲವು ಸಮಯಗಳಿಂದ ಮಾವ ಅಮ್ಮನ್ನ ಪೂಜಾರಿ ಹಾಗೂ ರಮಾನಂದರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದು, ಶನಿವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಕೆಲಸಕ್ಕೆ ತೆರಳಿದ್ದ ರಮಾನಂದರ ಪತ್ನಿ ಮನೆಗೆ ಬಂದಾಗ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದ್ದು, ಮನೆ ಹಿಂಭಾಗದ ತೆಂಗಿನ ಹೊಂಡದಲ್ಲಿ ರಮಾನಂದ ಶವವಾಗಿ ಪತ್ತೆಯಾಗಿದ್ದಾರೆ. ಕೊಲೆ ಆರೋಪಿ ಎನ್ನಲಾದ ಅಮ್ಮನ್ನ ಪೂಜಾರಿಯವರಿಗೂ ಹೊಡೆದಾಟದ ವೇಳೆ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಮನೆ ಪರಿಸರದಲ್ಲಿ ಭಾರೀ ಜನಜಮಾಯಿಸಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ. ಆರೋಪಿ ಅಮ್ಮನ್ನ ಪೂಜಾರಿಗೆ ಎರಡು ವಿವಾಹವಾಗಿದ್ದು, ಮೋಹಿನಿಯ ತಾಯಿ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಇನ್ನೋರ್ವ ಹೆಂಡತಿ ಇಬ್ಬರು ಹೆಣ್ಣುಮಕ್ಕಳ ಜೊತೆ ಇದೇ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಕುಡಿದ ಮತ್ತಿನಲ್ಲಿ ನಡೆದ ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.