ಉಡುಪಿ, ನ. 12 (DaijiworldNews/MB) : "ರಾಜಕಾರಣದ ಗುರಿ ರಾಜಕಾರಣವೇ ಅಲ್ಲ, ಅಧಿಕಾರವೂ ಅಲ್ಲ. ಜಗತ್ ವಂದ್ಯ ಭಾರತ ನಿರ್ಮಾಣ ಒಂದೇ ಗುರಿ. ದಾರಿ ರಾಜಕಾರಣ, ಅಧಿಕಾರವೇ ಸಾಧನ. ಅಂದು ಕೇಂದ್ರ ಸಚಿವರಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿ ಕಾಂಗ್ರೆಸ್ನ ನೀತಿ ಸರಿಯಿಲ್ಲ ಎನ್ನುವ ಕಾರಣಕ್ಕೆ ಆ ಪಕ್ಷ ತೊರೆದು, ಬಿಜೆಪಿ ಸೇರಿದರು. ಹತ್ತಾರು ಜನ ಹತ್ತಾರು ರೀತಿಯಲ್ಲಿ ಕಾಯಕವನ್ನು ಮಾಡುತ್ತಾ ಇದ್ದಾರೆ. ನಮ್ಮ ಆಯ್ಕೆ ರಾಜಕಾರಣ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಉಡುಪಿಯ ಕಾರ್ಯಕ್ರಮವೊಂದರಲ್ಲಿ ಹೇಳಿದರು.














''ಬಿಜೆಪಿಯಲ್ಲಿ ವ್ಯಕ್ತಿ ಪೂಜೆಗಿಂತ ತತ್ವ ಪೂಜೆ ಮಾಡುತ್ತೇವೆ. ಅದು ಭಾರತ ಮಾತೆ. ಅಧಿಕಾರವೇ ಗುರಿಯಲ್ಲ ಅದೊಂದು ಸಾಧನ. ಬಾರತ ನಿರ್ಮಾಣವೇ ಗುರಿ. ಭರತ ದೇಶದಲ್ಲಿ ಅದೆಷ್ಟು ಉತ್ತುಂಗಕ್ಕೆ ಬೆಳೆದರೂ ಬಿಜೆಪಿ ಕಾರ್ಯಕರ್ತರ ಒಂದೇ ಜೈ ಜೈಕಾರ ಅದು ಭಾರತ್ ಮಾತಾಕಿ ಜೈ. ಪಕ್ಷದಲ್ಲಿ ಕಾರ್ಯ ಪದ್ದತಿ ಮತ್ತು ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ. ಕಾರ್ಯಪದ್ದತಿಯಲ್ಲಿ ಅಭ್ಯಾಸ ವರ್ಗವೂ ಒಂದು. ಪ್ರಶಿಕ್ಷಣವು ಪಕ್ಷದ ಕಾರ್ಯಕರ್ತನನ್ನು ಸಾಧಕನನ್ನಾಗಿ ಮಾಡುತ್ತದೆ. ಆ ಮೂಲಕ ಸಂಘಟನೆ ಬಲವರ್ಧಿಸಲಾಗುತ್ತದೆ. ಇದರ ಮೂಲಕ ರಾಷ್ಟ್ರ ನಿರ್ಮಾಣ ಮಾಡುವುದನ್ನು ಹಿರಿಯರು ಕನಸು ಕಂಡಿದ್ದರು'' ಎಂದರು.
ಭಾರತಿಯ ಜನತಾ ಪಾರ್ಟಿ ಮಂಗಳೂರು ವಿಭಾಗದಿಂದ ಇಂದು ಹೋಟೇಲ್ ಶಾರದ ಇಂಟರ್ನ್ಯಾಷನಲ್ ಹಾಲ್ನಲ್ಲಿ ಆಯೋಜಿಸಿದ ಪ್ರಶಿಕ್ಷಣ ಕಾರ್ಯಗಾರದಲ್ಲಿ ಮಾತನಾಡಿ, ''ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ರ್ಮಾಣದ ಕನಸನ್ನು ನಮ್ಮ ಹಿರಿಯರು ಕಂಡಿದ್ದಾರೆ. ದನ ಕಾಯುವವನು ಉತ್ತಮ ಸಂಸ್ಕಾರ ಸಿಕ್ಕಾಗ ರಾಷ್ಟ್ರ ನಾಯಕನಾಗಬಹುದು ಎಂಬುದಕ್ಕೆ ಮೋದಿ ಉತ್ತಮ ನಿದರ್ಶನ. ಅಭ್ಯಾಸ ವರ್ಗದಲ್ಲಿ ಸಂಸ್ಕಾರ ಸಿಗುತ್ತದೆ. ಭಾರತವನ್ನು ಗುಲಾಮತನದಿಂದ ಮುಕ್ತ ಮಾಡಲು ಆರಂಭವಾದ ಕಾಂಗ್ರೆಸ್, ಆದರೆ ಮುಂದೆ ಅಧಿಕಾರದ ಲಾಲಸೆಯಿಂದ ಪಕ್ಷ ಸಿದ್ದಾಂತವನ್ನು ಮರೆಯಿತು'' ಎಂದು ನಳಿನ್ ಟೀಕಿಸಿದರು.
''ಭಾರತ್ ಮಾತಾಕಿ ಜೈ ಹೇಳುವುದನ್ನು ಮರೆತು ನೆಹರೂ ಕಿ ಜೈ, ಇಂದಿರಾ ಗಾಂದಿ ಕಿ ಜೈ, ರಾಜೀವ್ ಕಿ ಜೈ ಎಂದರು. ಇಟಲಿಯಿಂದ ಬಂದ ಸೋನಿಯಾ ಗಾಂಧಿಗೂ ಜೈಕಾರ ಹಾಕಿದರು. ಕುಟುಂಬ ರಾಜಕಾರಣ, ಜಾತಿ ಅಧಾರಿತ ವರ್ಗಿಕರಣ ಅರಂಭ ಮಾಡಿತು. ಇದರಿಂದ ಅಲ್ಪಸಂಖ್ಯತರು ಎನ್ನುವುದನ್ನು ಆರಂಭ ಮಾಡಿತು'' ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
''ಅಭ್ಯಾಸವರ್ಗ ವಿಚಾರಧಾರೆಯನ್ನು ಇನ್ನಷ್ಟು ಗಟ್ಟಿ ಮಾಡುತ್ತದೆ. ಬಿಜೆಪಿಯ ಏಕೈಕ ಗುರಿ, ಮುಂದಿನ ಚುನಾವಣೆಯಲ್ಲಿ ಎಲ್ಲಾ ಮತಗಟ್ಟೆಯನ್ನು ಗೆಲ್ಲುವುದು. ಆಗ ಗೆದ್ದರೆ ಬಿಜೆಪಿ ಶಾಶ್ವತವಾಗಿ ಉಳಿಯುತ್ತದೆ. ಅದು ಅಭ್ಯಾಸವರ್ಗ ಕಲಿಸುತ್ತದೆ. ಎರಡು ವಿಧಾನ ಸಭೆ, ಲೋಕಸಬೆ ಚುನಾವಣೆ ಬರುತ್ತದೆ. ಅದಕ್ಕಾಗಿ ಎಲ್ಲ ತಯಾರಿಯೂ ನಡೆದಿದೆ. 100 ಶೇಕಡಾ ಗೆಲ್ಲುವ ಭರವಸೆ ಇದೆ. ಅದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆದಿದೆ'' ಎಂದರು.
''ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆಯೇ ಇಲ್ಲ, ಯಡಿಯೂರಪ್ಪನವರೇ ಮುಂದಿನ ಎರಡುವರೆ ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ'' ಎಂದು ಹೇಳಿದ ಅವರು, ''ಕೆಲವರು ಕಾಂಗ್ರೆಸ್ಸಿನಲ್ಲಿ ಸ್ವಯಂಘೋಷಿತ ನಾಯಕರಾಗಿದ್ದಾರೆ. ಹುಲಿಯನ್ನು ಬಂಡೆ ದೂಡಿ ಹಾಕಿತು. ಬಂಡೆಯನ್ನು ಹುಲಿ'' ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಬಗ್ಗೆ ವ್ಯಂಗ್ಯವಾಡಿದರು.
''ಕಾಂಗ್ರೆಸ್ನಲ್ಲಿ ಸಂಗೀತ ಕುರ್ಚಿ ಆರಂಭವಾಗಿದೆ. ಚುನಾವಣೆ ಗೆಲ್ಲದೇ ಅವರವರೇ ತಾವು ಮುಖ್ಯಮಂತ್ರಿ ಎಂದು ಘೋಷಿಸಿಕೊಳ್ಳುತ್ತಿದ್ದಾರೆ. ನಾಯಕತ್ವದ ಗೊಂದಲ ಕಾಂಗ್ರೆಸ್ನಲ್ಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 30 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ. ಸಂಘಟನಾಶಕ್ತಿಯಲ್ಲಿ ಬಿಜೆಪಿ ನಂಬಿಕೆ ಇಡಬೇಕು. ಕಾರ್ಯಕರ್ತರನ್ನು ನಾಯಕನನ್ನಾಗಿಸುವ ಶಕ್ತಿ ಬಿಜೆಪಿಯಲ್ಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಗ ಪ್ರಭರಿ ಉದಯ್ ಕುಮಾರ್ ಶೆಟ್ಟಿ, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಪ್ರಶಿಕ್ಷಣ ಪ್ರಕೋಷ್ಟ ರಾಜ್ಯ ತಂಡದ ಸದಸ್ಯೆ ಮಂಜುಳಾ, ವಿಭಾಗ ಸಹ ಪ್ರಭರಿ ಗೋಪಾಲಕೃಷ್ಣ ಹೆರಳೆ ಉಪಸ್ಥಿತರಿದ್ದರು.