ಬಂಟ್ವಾಳ, ನ. 12 (DaijiworldNews/SM): ಇಲ್ಲಿನ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಂಡಿಗಳನ್ನು ಮುಚ್ಚುವ ಮೂಲಕ ಸಂಪೂರ್ಣ ಡಾಮರೀಕರಣ ಕಾರ್ಯ ಬಿ.ಸಿ.ರೋಡಿನಿಂದ ಆರಂಭಗೊಂಡಿದ್ದು ಬೆಳಿಗ್ಗೆಯಿಂದಲೇ ಹೆದ್ದಾರಿ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬಿ.ಸಿ. ರೋಡಿನಿಂದ ಗುಂಡ್ಯವರೆಗೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹೊಂಡಗುಂಡಿಗಳಿಂದ ತುಂಬಿದ್ದು ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿತ್ತು. ಈ ಹಿನ್ನೆಲೆ ಡಾಮರೀಕರಣ ಕಾಮಗಾರಿ ಆರಂಭಿಸಿದ್ದು, ಇಂದು ಸುದೀರ್ಘ ಟ್ರಾಫಿಕ್ ಜಾಂಗೆ ಕಾರಣವಾಯಿತು.



ರಸ್ತೆ ಸಂಪೂರ್ಣ ಡಾಮರೀಕರಣಕ್ಕೆ ಒತ್ತಾಯದ ಮಧ್ಯೆ ಪ್ರತಿಭಟನೆಯ ಎಚ್ಚರಿಕೆಗಳು ಕೂಡ ಕೇಳಿ ಬಂದಿತ್ತು. ಆ ಬಳಿಕ ಜಿಲ್ಲಾಧಿಕಾರಿ ಖಡಕ್ ಅದೇಶದಂತೆ ಇಂದು ಬೆಳಿಗ್ಗೆಯಿಂದ ಬಿಸಿರೋಡಿನಿಂದ ಹೊಂಡ ಗುಂಡಿಗಳಿಂದ ಅಯೋಮಯವಾಗಿದ್ದ ರಸ್ತೆಗೆ ಡಾಮರೀಕರಣ ನಡೆದಿತ್ತು. ಆದರೆ ಗುತ್ತಿಗೆ ವಹಿಸಿಕೊಂಡಿದ್ದ ಕಂಪೆನಿ ಸ್ಥಳೀಯ ಪೊಲೀಸ್ ಠಾಣೆಗೆ ಯಾವುದೇ ಪೂರ್ವ ಮಾಹಿತಿ ನೀಡದೆ ಕಾಮಗಾರಿ ಆರಂಭ ಮಾಡಿತ್ತು. ರಸ್ತೆ ಡಾಮರೀಕರಣ ಕಾಮಗಾರಿ ನಡೆಯುತ್ತಿದ್ದ ವೇಳೆ ಸಂಚಾರಕ್ಕೆ ಅಡಚಣೆಯಾಗಿ ಬೆಳಿಗ್ಗೆಯಿಂದ ಸುಮಾರು ಮಧ್ಯಾಹ್ನ ಮೂರು ಗಂಟೆಯವರೆಗೂ ಸಂಪೂರ್ಣ ರಸ್ತೆ ಬ್ಲಾಕ್ ಆಗಿತ್ತು.
ಮೆಲ್ಕಾರ್ ನಿಂದ ಬಿಸಿರೋಡುವರೆಗೆ ಹೆದ್ದಾರಿ ಸಂಪೂರ್ಣ ರಸ್ತೆ ಬ್ಲಾಕ್ ಆದರೆ ಮತ್ತೊಂದೆಡೆ ಹೆದ್ದಾರಿ ಬ್ಲಾಕ್ ಇದೆ ಎಂದು ತಪ್ಪಿಸಿಕೊಂಡು ಹೋಗುವ ಉದ್ದೇಶದಿಂದ ಪಾಣೆಮಂಗಳೂರು ಪೇಟೆ ಒಳ ರಸ್ತೆಯ ಮೂಲಕ ಹಳೆಯ ಸೇತುವೆಯ ಮೂಲಕ ಬಿಸಿರೋಡಿಗೆಂದು ಹೋದವರು ಹಳೆಯ ಸೇತುವೆಯಲ್ಲಿ ಟ್ರಾಫಿಕ್ ಜಾಮ್ ಗೆ ಸಿಲುಕಿ ಗಂಟೆಗಟ್ಟಲೆ ಉಳಿಯುವಂತಾಯಿತು. ರೋಗಿಗಳನ್ನು ಕರೆದುಕೊಂಡು ಹೋಗುವವರು ಕೂಡಾ ಟ್ರಾಫಿಕ್ ಜಾಮ್ ಗೆ ಸಿಲುಕಿ ಒದ್ದಾಡುವಂತಾಯಿತು. ಕೊನೆಗೆ ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್, ಗ್ರಾಮಾಂತರ ಠಾಣಾ ಎಸ್.ಐ.ಪ್ರಸನ್ನ, ಟ್ರಾಫಿಕ್ ಎಸ್.ಐ. ರಾಜೇಶ್ ಕೆ.ವಿ.ಸ್ಥಳದಲ್ಲಿ ಮೊಕ್ಕಾಂ ಹೂಡಿ ಹರಸಾಹಸ ಪಟ್ಟು ಅನ್ನ ನೀರು ಬಿಟ್ಟು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.