ಉಳ್ಳಾಲ, ನ. 12 (DaijiworldNews/SM): ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟುವಿನ ಕಲ್ಲಾಪುವಿನಿಂದ ಕಳವುಗೈದ ಪಿಕಪ್ ವಾಹನವನ್ನು ಕಳ್ಳನೋರ್ವ ಕದ್ದೊಯ್ದಿದ್ದು, ಈ ವಾಹನ ಸುರತ್ಕಲ್ ಠಾಣಾ ವ್ಯಾಪ್ತಿಯ ಚೇಳ್ಯಾರು ಬಳಿ ಮನೆಯ ಕಂಪೌಂಡಿಗೆ ಢಿಕ್ಕಿ ಹೊಡೆದು ಆರೋಪಿ ಸುರತ್ಕಲ್ ಪೊಲೀಸರ ವಶವಾಗಿರುವ ಘಟನೆ ಗುರುವಾರ ನಸುಕಿನ ಜಾವ ನಡೆದಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ದಕ್ಷಿಣಮೂರ್ತಿ ಎಂಬಾತನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತೊಕ್ಕೊಟ್ಟು ಕಲ್ಲಾಪು ಬಳಿಯಿರುವ ಸೂಪರ್ ಬಜಾರ್ ಎದುರು ನಿಲ್ಲಿಸಿದ್ದ ಪಿಕಪ್ ವಾಹನವನ್ನು ದಕ್ಷಿಣಮೂರ್ತಿ ಮಧ್ಯರಾತ್ರಿ ವೇಳೆ ಕಳವು ನಡೆಸಿದ್ದ. ಕಳವು ನಡೆಸಿದ ವಾಹನವನ್ನು ಕೊಂಡೊಯ್ಯುವ ಸಂದರ್ಭ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳ್ಯಾರು ಎಂಬಲ್ಲಿ ಮನೆಯೊಂದರ ಕಂಪೌಂಡಿಗೆ ಢಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಪಿಕಪ್ ವಾಹನ ಢಿಕ್ಕಿ ಹೊಡೆದು ನಿಂತಿದೆ.
ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸುರತ್ಕಲ್ ಪೊಲೀಸರು ದಕ್ಷಿಣಮೂರ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಆರೋಪಿ ಮದ್ಯದ ಅಮಲಿನಲ್ಲಿದ್ದರಿಂದಾಗಿ ಅಪಘಾತ ನಡೆದಿದೆ. ಈತನ ಇತರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ವಿಚಾರಣೆಗೆಂದು ಉಳ್ಳಾಲ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಳೆಯ ಪಿಕಪ್ ವಾಹನ ಆಗಿರುವುದರಿಂದ ಕಳ್ಳ ವಾಹನವನ್ನು ಡೈರೆಕ್ಟ್ ಸ್ಟಾರ್ಟ್ ಆಗುವಂತೆ ಮಾಡಿದ್ದ ಎನ್ನಲಾಗಿದೆ.