ಉಡುಪಿ ಜೂ03: ಸಾಮಾಜಿಕ ಜಾಲತಾಣಗಳಲ್ಲಿ ಕೋಳಿಯಿಂದ ನಿಫಾ ವೈರಸ್ ಹರಡುತ್ತದೆ ಎಂಬ ಸಂದೇಶ ಹರಡುತ್ತಿದ್ದು, ನಿಫಾ ವೈರಸ್ ಕೋಳಿಯಿಂದ ಹರಡುವುದಿಲ್ಲ ಎಂದು ಮಣಿಪಾಲ ವೈರಸ್ ರಿಸರ್ಚ್ ಇಲಾಖೆ ಮುಖ್ಯಸ್ಥ ಡಾ. ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೇರಳದಲ್ಲಿ ಅನೇಕ ಜೀವಗಳನ್ನು ಬಲಿ ಪಡೆದಿರುವ ಮಹಾಮಾರಿ ನಿಫಾ ವೈರಸ್ ಕೋಳಿಯಿಂದ ಹರಡುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಮಣಿಪಾಲ ಸೆಂಟರ್ ನಲ್ಲಿ ನಿಫಾ ವೈರಸ್ ಮಾದರಿ ಪರೀಕ್ಷೆ ಮಾಡಲಾಗಿದ್ದು, ಪರೀಕ್ಷೆಯಲ್ಲಿ ನಿಪಾ ವೈರಸ್ ಪತ್ತೆಯಾಗಿಲ್ಲ. ಲಕ್ಷ ಬಾವಲಿಗಳಲ್ಲಿ ಕೇವಲ ಐದರಲ್ಲಿ ಮಾತ್ರ ಇಂತಹ ವೈರಸ್ ಕಾಣಲು ಸಾಧ್ಯ. ಕೋಳಿಯಿಂದ ನಿಪಾ ವೈರಸ್ ಹರಡವುದಿಲ್ಲ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಹೇಳಿದ್ದಾರೆ.
ನಿಫಾ ಎನ್ನುವುದು ಸಾಂಕ್ರಾಮಿಕ ರೋಗವಲ್ಲ. ಆದರೆ ಮುನ್ನೆಚ್ಚರಿಕೆ ಅಗತ್ಯ. ಬಾವಲಿ ಕಚ್ಚಿದ ಹಣ್ಣುಗಳನ್ನು ತಿನ್ನದಿರುವುದು ಒಳಿತು. ಕೋಳಿಯಿಂದ ಹರಡುತ್ತದೆ ಎನ್ನುವ ಸಂಗತಿ ಸುಳ್ಳು. ಈ ಬಗ್ಗೆ ಅನಗತ್ಯ ಭಯಪಡುವ ಅಗತ್ಯಇಲ್ಲ. ಕೇರಳ ಸರ್ಕಾರದ ಕೋರಿಕೆಯ ಮೇರೆಗೆ ನಿಫಾ ವೈರಸ್ ರೋಗಿಗಳನ್ನು ಪರೀಕ್ಷಿಸಲು ಮಣಿಪಾಲದ ವೈದ್ಯರ ತಂಡ ಕೇರಳಕ್ಕೆ ತೆರಳಿತ್ತು. ಬಾವಲಿ ಹೊರತುಪಡಿಸಿದರೆ, ಬೇರೆ ಯಾವ ಪ್ರಾಣಿ-ಪಕ್ಷಿಗಳಲ್ಲೂ ನಿಫಾ ವೈರಸ್ ಕಾಣಲು ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.