ಉಡುಪಿ, ನ.13 (DaijiworldNews/PY): ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬ್ರಹ್ಮಾವರ ತಾಲೂಕಿನಲ್ಲಿ ಉಪ್ಪು ನೀರು ತಡೆ ಅಣೆಕಟ್ಟು ಸೇರಿದಂತೆ ಎರಡು ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ತಲಾ ರೂ. 35.00 ಕೋಟಿಯಂತೆ ಒಟ್ಟು ರೂ. 70.00 ಕೋಟಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿ ಉಡುಪಿ ಕ್ಷೇತ್ರಕ್ಕೆ ದೀಪಾವಳಿಯ ಬೃಹತ್ ಉಡುಗೊರೆಯನ್ನು ನೀಡಿದ್ದಾರೆ.

ಕೊರೊನಾ ಆರ್ಥಿಕ ಸಂಕಷ್ಟದ ಈ ಸಂದರ್ಭದಲ್ಲಿಯೂ ಉಡುಪಿ ಜನತೆಯ ಬೇಡಿಕೆಗಳಿಗೆ ಸ್ಪಂದಿಸುತ್ತಿರುವ ಮುಖ್ಯಮಂತ್ರಿಯವರಿಗೆ ಉಡುಪಿ ಜನತೆಯ ಪರವಾಗಿ ಶಾಸಕ ಕೆ. ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.
ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಸಮರ್ಪಕವಾಗಿ ನೀರಾವರಿ ಸೌಲಭ್ಯ ಕಲ್ಪಿಸುವ ಹಾಗೂ ಉಪ್ಪು ನೀರು ತಡೆಗಟ್ಟುವ ಈ ಮಹತ್ತರವಾದ ಬೃಹತ್ ಯೋಜನೆ ಸಂಬಂಧಿಸಿದ ಪೂರಕವಾದ ವರದಿಯನ್ನು ತಯಾರಿಸಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಲ್ಲಿ ಸಹಕರಿಸಿದ ಸಣ್ಣ ನೀರಾವರಿ ಸಚಿವ ಜೆ. ಸಿ. ಮಾಧುಸ್ವಾಮಿ ಅವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಬ್ರಹ್ಮಾವರ ತಾಲೂಕು ಮೊಗವೀರ ಪೇಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಸೀತಾನದಿಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ರೂ. 35.00 ಕೋಟಿ. ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಹೆರಾಯಿಬೆಟ್ಟು ಎಂಬಲ್ಲಿ ಮಡಿಸಾಲು ನದಿಗೆ ಸೇತುವೆ ಬಳಿ ಉಪ್ಪುನೀರು ತಡೆ ಅಣೆಕಟ್ಟು ನಿರ್ಮಾಣ ರೂ. 35.00 ಕೋಟಿ ಅನುದಾನಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ.