ಕಾರ್ಕಳ, ನ. 13 (DaijiworldNews/MB) : ರಾಜ್ಯ ಸರಕಾರ ಆದೇಶದಂತೆ ಹಸಿರು ಪಟಾಕಿ ಹೊರತು ಪಡಿಸಿ ಉಳಿದ ಯಾವುದೇ ರೀತಿಯ ಪಟಾಕಿಗಳ ಮಾರಾಟಕ್ಕೆ ನಿಷೇಧ ವಿಧಿಸಲಾಗಿದ್ದರೂ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಹಸಿರು ರಹಿತ ಪಟಾಕಿ ಬೇಕಾ ಬಿಟ್ಟಿಯಾಗಿ ಮಾರಾಟವಾಗುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ.

ಸರಕಾರದ ಅದೇಶ ಹೊರ ಬೀಳುವ ಮುಂಚಿತವಾಗಿ ಹಸಿರು ರಹಿತ ಪಟಾಕಿಯು ವ್ಯಾಪಾರಿಗಳ ಕೈ ಸೇರಿದ್ದು, ಸ್ಥಳೀಯಾಡಳಿತದ ಅನುಮತಿಯೊಂದಿಗೆ ಸ್ವಾಲ್ ತೆರೆದು ಪಟಾಕಿ ಮಾರಾಟಕ್ಕೆ ಅನುಮತಿಯನ್ನು ಪಡೆದುಕೊಂಡಿರುವ ಮಾಹಿತಿ ಲಭಿಸಿದೆ.
ಈ ಎಲ್ಲಾ ಬೆಳವಣಿಗೆಯ ಬಳಿಕ ರಾಜ್ಯ ಸರಕಾರವು ಕೊರೊನಾದ ಹಿನ್ನಲೆಯಲ್ಲಿ ಪರಿಸರ ಹಾಗೂ ಮಾನವನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ.
ಮನೆಮನೆಗಳಿಗೂ ಪಟಾಕಿ ಸರಬರಾಜು
ದೀಪಾವಳಿ ಹಬ್ಬದ ಪ್ರಯುಕ್ತ ಸರಣಿಯಾಗಿ ಸರಕಾರಿ ರಜೆ ಇರುವುದರಿಂದ ಸ್ವಾಲ್ ತೆರೆದು ಪಟಾಕಿ ಮಾರಾಟ ಮಾಡಿದರೆ ಕೇಸು ದಾಖಲಾದರೆ ಜಾಮೀನು ದೊರಕುವುದು ಕಷ್ಟಕರವಾಗಬಹುದೆಂಬ ಭೀತಿಯ ಕರಿಛಾಯೆಯ ನಡುವೆ ಕೆಲ ವ್ಯಾಪಾರಿಗಳು ಮನೆ ಮನೆಗಳಿಗೆ ಪಟಾಕಿ ಸರಬರಾಜು ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಫೇಸ್ಬುಕ್ ಹಾಗೂ ವಾಟ್ಸ್ಆಪ್ ಬಳಸಿಕೊಂಡಿದ್ದು, ತಮ್ಮ ಮೊಬೈಲ್ ನಂಬರ್ಗಳನ್ನು ಗ್ರಾಹಕರಿಗೆ ನೀಡಿದ್ದಾರೆ.
ಹಸಿರು ಪಟಾಕಿಯೇ ಗೊಂದಲ
ಮಾರಾಟ ಮಾಡುವ ದೃಷ್ಠಿಯಿಂದ ಪಟಾಕಿ ಖರೀದಿ ಮಾಡಿರುವ ವ್ಯಾಪಾರಿಗಳಿಗೆ ರಾಜ್ಯ ಸರಕಾರದ ಹೊಸ ಅದೇಶವು ನುಂಗಲಾರದ ತುಪ್ಪವಾಗಿ ಮಾರ್ಪಾಟ್ಟಿದೆ. ವಿವಿಧ ಇಲಾಖೆಗಳ ಅನುಮತಿ ಪಡೆದುಕೊಂಡು ವ್ಯಾಪಾರ ನಡೆಸಲು ಚಿಂತನೆಯಲ್ಲಿ ಇದ್ದರೂ ಹಸಿರುವ ಪಟಾಕಿ ಮಾತ್ರವೇ ಮಾರಾಟ ಮಾಡಬೇಕೆಂಬುವುದು ಸರಕಾರದ ಸ್ವಷ್ಟ ನಿದೇಶನವಾಗಿದೆ. ಹಸಿರು ಅಥವಾ ಹಸಿರು ರಹಿತ ಪಟಾಕಿ ಇದನ್ನು ಗುರುತಿಸುವುದಕ್ಕೂ ಇಲಾಖೆಗೆ ಕಷ್ಟಕರವಾಗಿ ಮಾರ್ಪಟ್ಟಿರುವುದಂತು ಸತ್ಯ.