ಮಣಿಪಾಲ, ನ.13 (DaijiworldNews/PY): ಮಕ್ಕಳಿಗಾಗಿ ವಿಶೇಷ ನೇತ್ರ ಚಿಕಿತ್ಸಾ ವಿಭಾಗ ಮತ್ತು ಎಕ್ಸ್ಪ್ರೆಸ್ ಕ್ಲಿನಿಕ್ ಅನ್ನು ನ.13ರ ಶುಕ್ರವಾರ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಉದ್ಘಾಟಿಸಲಾಯಿತು.


ಮಕ್ಕಳ ನೇತ್ರ ಚಿಕಿತ್ಸಾಲಯವನ್ನು ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಶರತ್ ಕುಮಾರ್ ರಾವ್ ಮತ್ತು ಎಕ್ಸ್ಪ್ರೆಸ್ ನೇತ್ರ ಚಿಕಿತ್ಸಾಲಯವನ್ನು ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ. ಜಿ. ಮುತ್ತನ ಅವರು ಉದ್ಘಾಟಿಸಿದರು.
ವಿಶೇಷ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಡಾ ಶರತ್ ಕುಮಾರ್ ರಾವ್ ಅವರು, “ಮಕ್ಕಳ ರೋಗ ಮತ್ತು ರೋಗನಿರ್ಣಯವು ವಯಸ್ಕರಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಆದ್ದರಿಂದ ಮಕ್ಕಳನ್ನು ಚಿಕಿತ್ಸೆಗಾಗಿ ವಿಭಿನ್ನವಾಗಿ ಪರಿಗಣಿಸುವುದು ಮುಖ್ಯ. ಮಕ್ಕಳ ರೋಗಿಗಳಿಗೆ ವಿಶ್ವಾದ್ಯಂತ ಅನೇಕ ಉಪವಿಭಾಗಗಳು ಬರುತ್ತಿವೆ, ಇದು ನೇತ್ರವಿಜ್ಞಾನದಲ್ಲೂ ಸಹ. ಇಂದು ಕಸ್ತೂರ್ಬಾ ಆಸ್ಪತ್ರೆಯಲ್ಲಿಯೂ ಮಕ್ಕಳ ನೇತ್ರ ಚಿಕಿತ್ಸಾಲಯ ಪ್ರಾರಂಭವಾಗುತ್ತಿರುವುದರಿಂದ ಇದು ಮಕ್ಕಳ ರೋಗಿಗಳಿಗೆ ಬಹಳಷ್ಟು ಉಪಯುಕ್ತವಾಗಲಿದೆ ಎಂದು ನಾನು ಭಾವಿಸುತ್ತೇನೆ” ಎಂದರು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಕಣ್ಣಿನ ವಿಭಾಗವು ಮಕ್ಕಳಿಗೆ ಮತ್ತು ಪೋಷಕರಿಗೆ ಸುಲಭವಾಗಲೆಂದು ಮಕ್ಕಳ ಶಾಲಾ ರಜಾ ದಿನದಂದು ಈ ವಿಶೇಷ ಮಕ್ಕಳ ನೇತ್ರ ಚಿಕಿತ್ಸಾಲಯವನ್ನು ಪ್ರಾರಂಭಿಸುತ್ತಿದ್ದೇವೆ. ಈ ಸೇವೆಯು ಪ್ರತೀ ಶನಿವಾರ ಮಧ್ಯಾಹ್ನ 1.30 ರಿಂದ ಸಂಜೆ 4.30 ರವರೆಗೆ ಕಾರ್ಯನಿರ್ವಹಿಸುತ್ತದೆ (ಮೂರನೇ ಶನಿವಾರ ಹೊರತುಪಡಿಸಿ). ಮಕ್ಕಳಲ್ಲಿ ಕಂಡು ಬರುವ ದೃಷ್ಟಿ ದೋಷ, ಕಣ್ಣಿನ ಪೊರೆಯ ತೊಂದರೆ, ಮೆಳ್ಳೆಗಣ್ಣು, ಅಂಬ್ಲ್ಯೋಪಿಯಾ ಮತ್ತು ಇತರ ತೊಂದರೆಗಳಿಗೆ ಚಿಕಿತ್ಸೆ ಇಲ್ಲಿ ನೀಡಲಾಗುವುದು. ಅಲ್ಲದೇ ಕರಿ ಗುಡ್ಡೆ, ಅಕ್ಷಿಪಟಲ ಅಥವಾ ಗ್ಲುಕೋಮಾ ತೊಂದರೆ ಇದ್ದರೆ ಅದಕ್ಕೆ ಸಂಬಂಧ ಪಟ್ಟ ತಜ್ಞರಿಂದ ಚಿಕಿತ್ಸೆ ನೀಡಲಾಗುವುದು. ಚಿಕ್ಕ ಮಕ್ಕಳಲ್ಲಿಯೂ ಉತ್ತಮ ದೃಷ್ಟಿಗಾಗಿ ಕೆಲವೊಮ್ಮೆ ಕನ್ನಡಕದ ಅವಶ್ಯಕತೆ ಇರಬಹುದು ಮತ್ತು ಮೆಳ್ಳೆಗಣ್ಣು ದೃಷ್ಟಿಯ ಬೆಳವಣಿಗೆಗೆ ಹಾನಿ ಮಾಡುತ್ತದೆ. ಆದ್ಧರಿಂದ ಯಾವುದಾದರು ಮಕ್ಕಳಲ್ಲಿ ದೂರ ದೃಷ್ಟಿ ಅಥವಾ ಸಮೀಪ ದೃಷ್ಟಿ ದೋಷವಿದ್ದರೆ, ಮೆಳ್ಳೆಗಣ್ಣು, ಪದೇ ಪದೇ ಕಣ್ಣನ್ನು ಮುಚ್ಚುವುದು ಅಥವಾ ಉಜ್ಜಿಕೊಳ್ಳುತ್ತಿದ್ದರೆ ಅವರನ್ನು ಶೀಘ್ರವೇ ಕಣ್ಣಿನ ತಜ್ಞರ ಬಳಿಗೆ ಕರೆದುಕೊಂಡು ಹೋಗಬೇಕು. ಮಕ್ಕಳ ನೇತ್ರ ಚಿಕಿತ್ಸಾಲಯವು ಮಕ್ಕಳ ಕಣ್ಣಿನ ದೋಷದ ನಿರ್ವಹಣೆಗೆ ಸಮಗ್ರವಾದ ಆರೈಕೆ ಒದಗಿಸುವ ಆಶಯವನ್ನು ಹೊಂದಿದೆ.
ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಡಾ ಚಿರಂಜೊಯ್ ಮುಖೋಪಾಧ್ಯಾಯ್, ಡಾ ಪದ್ಮರಾಜ್ ಹೆಗ್ಡೆ ಮತ್ತು ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ತೆ ಡಾ. ಸುಲತಾ ವಿ ಭಂಡಾರಿ ಉಪಸ್ಥಿತರಿದ್ದರು.
ರೋಗಿಗಳ ಬೇಡಿಕೆಯ ಮೇರೆಗೆ, ನಾವು ಎಕ್ಸ್ಪ್ರೆಸ್ ಕ್ಲಿನಿಕ್ ಅನ್ನು ಆರಂಭಿಸುತ್ತಿದ್ದು, ಈ ಸೌಲಭ್ಯವು ಪೂರ್ವನಿಗಧಿತ ಆಧಾರದ ಮೇಲೆ ಮಾತ್ರ ದೊರೆಯಲಿದೆ. ಕನ್ನಡಕ ಬದಲಾವಣೆ, ಕಣ್ಣಲ್ಲಿ ಚುಚ್ಚುವಿಕೆ, ಕೆಂಗಣ್ಣು, ಕಣ್ಣಿನಲ್ಲಿ ನೀರಿಳಿಯುವಿಕೆ, ಕಣ್ಣಿಗೆ ಔಷಧಿ ಹಾಕದೆ ಡಯಾಬಿಟಿಕ್ ರೆಟಿನೋಪತಿ ತಪಾಸಣೆ ಮತ್ತು ಮುಂತಾದ ತೊಂದರೆಗಳಿಗೆ ಕಾಯದೆ ವೇಗವಾಗಿ ಕಣ್ಣಿನ ಚಿಕಿತ್ಸೆಯನ್ನು ಬಯಸುವ ರೋಗಿಗಳ ಅಗತ್ಯಗಳನ್ನು ಪೂರೈಸುವುದೇ ಈ ಎಕ್ಸ್ಪ್ರೆಸ್ ಕ್ಲಿನಿಕ್ಕಿನ ಉದ್ದೇಶವಾಗಿದೆ. ಈ ಸೌಲಭ್ಯವು ದೃಷ್ಟಿ ಪರೀಕ್ಷೆ, ಕಣ್ಣಿಗೆ ಔಷಧಿ ಹಾಕದೆ ಕಣ್ಣಿನ ಪರೀಕ್ಷೆಗೆ ಅನ್ವಯಿಸುತ್ತದೆ. (ಕಣ್ಣಿನ ಪೊರೆ / ಗ್ಲುಕೋಮಾ / ರೆಟಿನಾ ಇತ್ಯಾದಿ ವಿವರವಾದ ಪರೀಕ್ಷೆಗಳಿಗೆ ಇದು ಅನ್ವಯಿಸುವುದಿಲ್ಲ). ಪೂರ್ವ ನಿಗಧಿಗಾಗಿ 0820 2923780 ಕರೆ ಮಾಡಿ ಎಂದು ಮಾಹಿತಿ ನೀಡಿದ್ದಾರೆ.