ಉಡುಪಿ, ನ.13 (DaijiworldNews/PY): "ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶದ ಎಲ್ಲಾ ಕುಟುಂಬಗಳಿಗೆ 55 ಲೀಟರ್ ಶುದ್ಧ ಕುಡಿಯುವ ನೀರನ್ನು ನಲ್ಲಿ ಸಂಪರ್ಕದ ಮೂಲಕ 2023ರ ಅಂತ್ಯಕ್ಕೆ ಒದಗಿಸಲು ಯೋಜಿಸಲಾಗಿದ್ದು, ಈ ಯೋಜನೆಯ ಸದುಪಯೋಗವನ್ನು ಗ್ರಾಮೀಣ ಜನರು ಪಡೆಯಬೇಕು" ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದರು.


ಅವರು ಶುಕ್ರವಾರ ಅಲೆವೂರಿನ ಸುಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ, ಶಾಲೆ, ಆಶ್ರಮ ಮತ್ತು ವಸತಿ ಶಾಲೆಗಳಿಗೆ ಕೊಳವೆ ನೀರು ಸಂಪರ್ಕ ಕಲ್ಪಿಸಲು ಆಯೋಜಿಸಲಾದ 100 ದಿನಗಳ ವಿಶೇಷ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
"ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ರಾಜಾ, ಜಲ ಜೀವನ್ ಮಿಷನ್ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲ ಶಕ್ತಿ ಮಿಷನ್ ಭಾರತ್ ಸರ್ಕಾರವು ಜಲ್ ಜೀವನ್ ಮಿಷನ್ ಯೋಜನೆಯಡಿ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರ, ಶಾಲೆ, ಆಶ್ರಮ ಮತ್ತು ವಸತಿ ಶಾಲೆಗಳಿಗೆ ಕೊಳವೆ ನೀರು ಸಂಪರ್ಕ (ಕಾರ್ಯಾತ್ಮಕ ನಳ ಸಂಪರ್ಕ) ಕಲ್ಪಿಸಲು ವಿಶೇಷ ಆಂದೋಲನವನ್ನು ಆಯೋಜಿಸಲಾಗಿರುತ್ತದೆ" ಎಂದು ಹೇಳಿದರು.
"ಅಕ್ಟೋಬರ್ 2, 2020 ರಿಂದ 100 ದಿನಗಳ ಒಳಗಾಗಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶುದ್ಧ, ಸುರಕ್ಷಿತ ಕುಡಿಯುವ ನೀರು ಸಂಪರ್ಕ ಇಲ್ಲದಂತಹ ಅಂಗನವಾಡಿ ಕೇಂದ್ರಗಳು ಶಾಲೆಗಳು, ಆಶ್ರಮ ಶಾಲೆಗಳು, ವಸತಿ ಶಾಲೆಗಳು, ಗ್ರಾಮ ಪಂಚಾಯತ್ ಕಛೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಕೇಂದ್ರಗಳು, ಸಮುದಾಯ ಶೌಚಾಲಯಗಳಿಗೆ ಕೊಳವೆ ನೀರು ಸಂಪರ್ಕ ಕಲ್ಪಿಸುವುದು ಈ ಆಂದೋಲನದ ಮುಖ್ಯ ಗುರಿಯಾಗಿದೆ" ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಬೇಬಿ ರಾಜೇಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕಿರಣ್ ಪಡ್ನೇಕರ್, ಅಲೆವೂರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಹಾಗೂ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮೋಹನ್ ರಾಜ್, ಅಲೆವೂರು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಜಿಲ್ಲಾ ಪಂಚಾಯತ್ ಎಎಒ ಯೋಜನಾ ವ್ಯವಸ್ಥಾಪಕ ಸುಧೀರ್ ಎ.ಕೆ. ಸುಬೋಧಿನಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ರಾಘವ ನಾಯ್ಕ ಉಪಸ್ಥಿತರಿದ್ದರು.
ಅಲೆವೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಬೆನ್ನೂರ್ ಸ್ವಾಗತಿಸಿ, ನಿರೂಸಿದರು.