ಮಂಗಳೂರು, ನ. 13 (DaijiworldNews/SM): ಮಂಗಳೂರಿನ ನಾಗರಿಕರನ್ನು ಪಾಲಿಕೆಯ ಆಡಳಿತದಲ್ಲಿ ಭಾಗವಹಿಸುವಿಕೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ರಚನೆಯಾಗಲಿದೆ. ಪ್ರತಿಯೊಂದು ವಾರ್ಡ್ ಗೆ 10 ಜನರ ಒಂದು ವಾರ್ಡ್ ಕಮಿಟಿ ರಚನೆಯಾಗಲಿದೆ.

ವಾರ್ಡ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಹಾಗೂ ಕಾರ್ಪೊರೇಟರ್ ನೇತೃತ್ವವಹಿಸಿ ನಡೆಸುವ ಕಾಮಗಾರಿಗಳ ಲೆಕ್ಕ ಹಿಡಿಯಲು ಹಾಗೂ ಭ್ರಷ್ಟಾಚಾರ ಮುಕ್ತವನ್ನಾಗಿಸಲು ವಾರ್ಡ್ ಸಮಿತಿ ನೆರವಾಗಲಿದೆ.
ಈ ಹಿಂದೆ ಆಯಾ ವಾರ್ಡ್ ಕಾರ್ಪೊರೇಟರ್ ಗಳು ತಮ್ಮ ಇಚ್ಛೆಯಂತೆ ಅಧಿಕಾರ ಚಲಾಯಿಸುತ್ತಿದ್ದರು. ತಮಗೆ ಸರಿ ಎಣಿಸಿದ ಕಾಮಗಾರಿಗಳನ್ನು ಮಾಡುತ್ತಿದ್ದರು. ಇದರಿಂದಾಗಿ ನಾಗರಿಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ಸಿಗದೆ ನಾಗರಿಕರು ಸಮಸ್ಯೆಗೊಳಗಾಗಿದ್ದರು. ಕೆಲವೇ ಕೆಲವು ಸದಸ್ಯರು ಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಇನ್ನು ಮುಂದಿನ ದಿನಗಳಲ್ಲಿ ದರ್ಪದ ಆಡಳಿತಕ್ಕೆ ಬ್ರೇಕ್ ಬೀಳಲಿದೆ.
ವಾರ್ಡ್ ಕಮಿಟಿಯಲ್ಲಿ ಯಾರು ಸದಸ್ಯರಾಗಬಹುದು?
ವಾರ್ಡ್ ಕಮಿಟಿಯಲ್ಲಿ ಮೂವರು ಮಹಿಳೆಯರು ಸದಸ್ಯರಾಗಿರಬೇಕು. ಇಬ್ಬರು ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಇಬ್ಬರು ಎನ್ ಜಿಒ ಸದಸ್ಯರು (ಬೇರೆ ಬೇರೆ ಎರಡು ಎನ್ ಜಿಒ ಸದಸ್ಯರು) ಉಳಿದ ಮೂವರು ಸಾಮಾನ್ಯ ಅಭ್ಯರ್ಥಿಗಳು ಸದಸ್ಯರಾಗಬಹುದಾಗಿದೆ.
ವಾರ್ಡ್ ಕಮಿಟಿ ರಚನೆಗೆ ಕಾರಣಗಳೇನು?
ಪಾಲಿಕೆ ವತಿಯಿಂದ ಜನರಿಗೆ ಸಿಗುವ ನ್ಯಾಯಯುತವಾದ ಹಕ್ಕುಗಳನ್ನು ಜನರಿಗೆ ತಲುಪಿಸಲು ಕೆಲವು ಕಾರ್ಪೋರೇಟರ್ ಗಳು ವಿಫಲವಾಗಿದ್ದಾರೆ. ನಾಗರಿಕರಿಗೆ ಸಿಗಲಿರುವ ಸೌಕರ್ಯಗಳನ್ನು ನಾಗರಿಕರಿಗೆ ತಲುಪಿಸುವ ಹಿನ್ನೆಲೆಯಲ್ಲಿ ಇಂತಹ ೧೦ ಜನರ ವಾರ್ಡ್ ಕಮಿಟಿ ರಚಿಸಲಾಗಿದೆ. ಕಾರ್ಪೊರೇಟರ್ ಗಳ ಕೆಲಸವನ್ನು ಏಕೌಂಟೇಬಲ್/ ಲೆಕ್ಕ ಹಿಡಿಯುವುದು ಇವರ ಕರ್ತವ್ಯವಾಗಿದ್ದು, ಇದರ ಜೊತೆಗೆ ವಾರ್ಡ್ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದು ಇವರ ಕರ್ತವ್ಯವಾಗಿದೆ.
ಇನ್ನು ಈ ನಡುವೆ ವಾರ್ಡ್ ಡೆವಲಪ್ ಮೆಂಟ್ ಪ್ಲಾನ್ ರಚಿಸಬೇಕಾಗುತ್ತದೆ. ಪ್ರತಿ ವಾರ್ಡ್ ನವರು ಇದನ್ನು ಸಿದ್ಧಪಡಿಸಿ ಕಾರ್ಪೊರೇಷನ್ ಗೆ ಸಲ್ಲಿಸಬೇಕು. ಅದರ ಪ್ರಕಾರ ಪಾಲಿಕೆ ಅನುಮತಿಸಿ ಕಾಮಗಾರಿಗಳ ಕಾರ್ಯಾರಂಭಕ್ಕೆ ಸೂಚನೆ ನೀಡುತ್ತದೆ. ಇಲ್ಲಿ ತೆಗೆದುಕೊಂಡ ಕೆಲಸಗಳು ಮಾತ್ರವೇ ಪೂರ್ಣಗೊಳಿಸಬಹುದು. ಇನ್ನು ಮುಂದೆ ಕಾರ್ಪೊರೇಟರ್ ತಮ್ಮ ಇಚ್ಛೆಯಂತೆ ಮಾಡುವಂತಿಲ್ಲ. ಕಮಿಟಿಯೊಂದಿಗೆ ಚರ್ಚಿಸಿ ಕಾರ್ಯ ಮಾಡಬೇಕಾಗುತ್ತದೆ.
ಇನ್ನು ವಾರ್ಡ್ ಕಮಿಟಿ ತಿಂಗಳಿಗೊಮ್ಮೆ ಮೀಟಿಂಗ್ ನಡೆಸಬೇಕು. ಈ ಸಭೆಯಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಕರಡು ನಕಾಶೆ ಸಿದ್ಧಪಡಿಸುವ ಜವಾಬ್ದಾರಿ ಸಭೆ ಹೊಂದಿದೆ. ಹಾಗೂ ಅವುಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲೂ ಸಭೆಯಲ್ಲಿ ಚರ್ಚಿಸಬೇಕಾಗುತ್ತದೆ.
ಇನ್ನು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಕಾರ್ಪೊರೇಟರ್ ಗಳ ಗಮನಕ್ಕೆ ತರಬೇಕಾಗುತ್ತದೆ. ತಪ್ಪು ನಡೆದಲ್ಲಿ ತಕ್ಷಣಕ್ಕೆ ಗುತ್ತಿಗೆದಾರ ಅಥವಾ ಸಂಬಂಧಿಸಿದವರಿಗೆ ತಿಳಿಸಬೇಕಾಗುತ್ತದೆ. ಅಲ್ಲೂ ಆಗದಿದ್ದಲ್ಲಿ ವಾರ್ಡ್ ಕಮಿಟಿ ಸಭೆಯಲ್ಲಿ ಚರ್ಚಿಸಬೇಕಾಗುತ್ತದೆ. ಅಷ್ಟಾದರೂ ಪರಿಹಾರ ಸಿಗದಿದ್ದ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತರಿಗೆ ದೂರು ನೀಡುವ ಅಧಿಕಾರ ವಾರ್ಡ್ ಕಮಿಟಿ ಹೊಂದಿದೆ. ವಾರ್ಡ್ ಕಮಿಟಿ ರಚಿಸಲು ಪಾಲಿಕೆ ಆಯುಕ್ತರು ಸೆಲೆಕ್ಷನ್ ಕಮಿಟಿಯನ್ನು ರಚನೆ ಮಾಡುತ್ತಾರೆ. ಅದರಲ್ಲಿ ಅಧಿಕಾರಿಗಳಿಗೆ ಮಾತ್ರವೇ ಅವಕಾಶವಿದ್ದು, ಆಯ್ಕೆ ಸಮಿತಿಯಲ್ಲಿ ಕಾರ್ಪೊರೇಟರ್ ಗಳಿಗೆ ಅವಕಾಶವಿಲ್ಲ.
ಸಮಿತಿ ಸದಸ್ಯರಾಗಬೇಕಾದ್ರೆ ಏನೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು?
ಡೇಟ್ ಆಫ್ ಬರ್ತ್ ಇರುವ ಸರ್ಟಿಫಿಕೆಟ್(ಪಾನ್ ಕಾರ್ಡ್, ಎಸ್ ಎಸ್ ಎಲ್ ಸಿ, ಪಾಸ್ ಪೋರ್ಟ್, ಡಿಎಲ್, ಆಧಾರ್ ಬಿಟ್ಟು ಈ ದಾಖಲೆಗಳಲ್ಲಿ ಒಂದು) ಆಧಾರ್ ಕಾರ್ಡ್, ಓಟರ್ ಐಡಿ, ಜಾತಿ ಪ್ರಮಾಣ ಪತ್ರ(ಎಸ್ ಸಿ ಎಸ್ಟಿ ವರ್ಗದವರಿಗೆ), ಪ್ರಾಥಮಿಕ ಆರೋಗ್ಯ ಕೇಂದ್ರದ ರಿಪೋರ್ಟ್(ಕಡ್ಡಾಯವಲ್ಲ) ಸಮಾಜ ಸೇವೆಯ ದಾಖಲೆಗಳು.